ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ನಗರದಲ್ಲಿ ಅಡುಗೆ ಅನಿಲದ ಕೊರತೆ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದೆ. ನಗರದಲ್ಲಿನ ಒಂದು ಹೋಟೆಲ್‌ನಲ್ಲಿ ಬ್ರೇಕ್‌ಫಾಸ್ಟ್ ಮಾಡಿದ ಗ್ರಾಹಕರಿಗೆ ಬಿಲ್‌ನಲ್ಲಿ ‘ಗ್ಯಾಸ್ ಸಪ್ಲೈ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಸೇರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪಿಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು Mr. ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿ ಬ್ರೇಕ್‌ಫಾಸ್ಟ್ ಮಾಡಿದ್ದಾರೆ. ನಂತರ ನೀಡಿದ ಬಿಲ್‌ನಲ್ಲಿ ಗ್ಯಾಸ್ ಸಪ್ಲೈ ಚಾರ್ಜ್ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣ ಸೇರಿಸಿರುವುದನ್ನು ನೋಡಿ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಬಿಲ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಬಿಲ್‌ಗೆ ನೆಟ್ಟಿಗರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ದೊಡ್ಡ ಮಟ್ಟದ ಸ್ಕ್ಯಾಮ್ ಆಗಿದ್ದು, ಸಾರ್ವಜನಿಕರನ್ನು ಲೂಟಿ ಮಾಡುವ ಪ್ರಯತ್ನವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



