ಕನ್ನಡ–ತಮಿಳು ಕಿರುತೆರೆ ಲೋಕದಲ್ಲಿ ಬೆಳೆಯುತ್ತಿರುವ ನಟಿಯಾಗಿ ಗುರುತಿಸಿಕೊಂಡಿದ್ದ ನಂದಿನಿ ಸಿಎಂ ಅವರ ಅಕಾಲಿಕ ನಿಧನ ಅಭಿಮಾನಿಗಳನ್ನು ದುಃಖಕ್ಕೀಡು ಮಾಡಿದೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡು ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ನಂದಿನಿ ಅವರು ಕನ್ನಡ ಕಿರುತೆರೆಯಲ್ಲಿ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತಮಿಳಿನ ಜನಪ್ರಿಯ ‘ಗೌರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು, ದ್ವಿಪಾತ್ರದ ಮೂಲಕ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ದುರ್ಗಾ ಹಾಗೂ ಕನಕ ಎಂಬ ಪಾತ್ರಗಳು ಅವರಿಗೆ ವಿಶೇಷ ಗುರುತನ್ನು ತಂದಿದ್ದವು.
ಮೂಲತಃ ಕೊಟ್ಟೂರು ಮೂಲದವರಾದ ನಂದಿನಿ, ನಟನೆಯ ಕನಸನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದಿದ್ದರು. ಪಿಜಿಯಲ್ಲಿ ವಾಸವಿದ್ದ ಅವರು ತಾಯಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಿರುತೆರೆ ಲೋಕದಲ್ಲಿ ಹೊಸ ಅವಕಾಶಗಳು ತಲಪುವ ಹಂತದಲ್ಲಿದ್ದ ಈ ಸಮಯದಲ್ಲಿ ಅವರು ಈ ತೀರ್ಮಾನ ಕೈಗೊಂಡಿರುವುದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ‘ಗೌರಿ’ ಧಾರಾವಾಹಿ ತಂಡಕ್ಕೂ ಈ ಸುದ್ದಿ ಆಘಾತ ಉಂಟುಮಾಡಿದೆ. ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸುತ್ತಿದ್ದಾರೆ.
ನಂದಿನಿ ಅವರ ನಿಧನದಿಂದ ಕಿರುತೆರೆ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ತನಿಖಾ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.



