ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರರು ಹಾಲು-ಜೇನಿನಂತೆ ಅನ್ಯೋನ್ಯತೆಯಿಂದ ಜೀವನ ಸಾಗಿಸುವ ಪವಿತ್ರ ಬಂಧವಾಗಿದೆ ಎಂದು ಸವಣೂರ ದೊಡ್ಡಹುಣಸೇಮಠದ ಶ್ರೀ ಚನ್ನಬಸವ ಮಹಸ್ವಾಮಿಗಳು ನುಡಿದರು.
ಅವರು ಬುಧವಾರ ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ನವ ದಂಪತಿಗಳು ತಂದೆ-ತಾಯಿ, ಅತ್ತೆ-ಮಾವ, ಗುರು ಹಿರಿಯರಲ್ಲಿ ವಿಧೇಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸಂಸಾರದ ಗುಟ್ಟು ಬಿಟ್ಟುಕೊಡದೇ ಪ್ರೀತಿ, ವಿಶ್ವಾಸದಿಂದ ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ. ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠ-ಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು. ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಚನ್ನವೀರ ಸ್ವಾಮಿಗಳು ಸಮಾಜಮುಖಿ ಕಾರ್ಯದಲ್ಲಿ ಹೆಸರಾಗಿದ್ದು, ಭಕ್ತರು ಸಹಾಯ-ಸಹಕಾರ ನೀಡಬೇಕೆಂದರು.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಗುಡ್ಡದಾನ್ವೇರಿ ಮಠದ ಶಿವಯೋಗಿಶ್ವರ ಮಹಾಸ್ವಾಮಿಗಳು, ಹೊಸರಿತ್ತಿಯ ಗುದ್ದಲೀಶ್ವರ ಶ್ರೀ, ನೀಲಗುಂದದ ಚನ್ನಬಸವ ಶ್ರೀ, ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ಕುಂದಗೋಲದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ದಾನಿಗಳಾದ ಸೋನಾಳದ ವಿಜಯಕುಮಾರ ಬಿರಾದಾರ, ಬಾಲ್ಕಿಯ ಲೋಕೇಶ ಹನಮಶೆಟ್ಟಿ, ಲಕ್ಷೆö್ಮÃಶ್ವರದ ರಾಘವೇಂದ್ರ ಶೇಠ, ಬಾಪೂಗೌಡ ಪಾಟೀಲ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
10 ಜೋಡಿಗಳು ವಿವಾಹ ಬಂಧಕ್ಕೊಳಗಾದರು. ನಂತರ ಶ್ರೀಗಳ ತುಲಾಭಾರ, ಗುರುಕುಲ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ, ಕಡುಬಿನ ಕಾಳಗ ಹಾಗೂ ಮಹಾತ್ಮರ ಬದುಕು-ಬೆಳಕು ಕುರಿತು ಚಿಂತನಗೋಷ್ಠಿ ನಡೆಯಿತು. ಜಾತ್ರೆಗೆ ಆಗಮಿಸಿದ ಅಪಾರ ಭಕ್ತ ಸಮೂಹ ಜಾತ್ರೆಯ ವಿಶೇಷತೆಯಾದ ಕರಿಂಡಿ, ಖಡಕ್ ರೊಟ್ಟಿ, ಗೋದಿಹುಗ್ಗಿ ಸವಿದರು.
ಮಂಗಳವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅನ್ನದಾನೀಶ್ವರ ಜಗದ್ಗುರುಗಳು, ಸಂಸ್ಕೃತಿ, ಆಚಾರ-ವಿಚಾರ, ಮೌಲ್ಯಗಳನ್ನು ಬಿತ್ತುವ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಮಠ-ಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮನುಷ್ಯನ ಬದುಕು ಮೌಲ್ಯಯುತ ಮತ್ತು ಸ್ಮರಣೀಯವಾಗಿರಲು ಧರ್ಮದ ತಳಹದಿಯಲ್ಲಿ ಸಾಗಬೇಕು. ಜನಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡ ಬಸವಾದಿ ಶರಣರ, ಸಂತರ, ಮಹಾತ್ಮರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು. ಲಿಂ. ನಿರಂಜನ ಮಹಾಸ್ವಾಮಿಳು ಕೈಗೊಂಡ ಸಮಾಜಮುಖಿ ಕಾರ್ಯ, ಧಾರ್ಮಿಕ ವಿಚಾರಗಳು, ಮಾನವೀಯ ಮೌಲ್ಯಗಳು ದಾರಿದೀಪವಾಗಿವೆ. ಅವರು ತೋರಿದ ಮಾರ್ಗದಲ್ಲಿ ಮಠವು ಅನಾಥ, ಬಡ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಮಹಾಸ್ವಾಮಿಗಳು, ಬಳೂಟಗಿ ಶಿವಕುಮಾರ ದೇವರು ಸೇರಿ ಜನಪ್ರತಿನಿಧಿಗಳು, ಗಣ್ಯಮಾನ್ಯರು ಉಪಸ್ಥಿತರಿದ್ದರು. ಶಿಕ್ಷಕ ರೇಣುಕಗೌಡ ಪಾಟೀಲ, ಮಹದೇವ ಬಿಷ್ಟನವರ, ಕೆ.ಎಸ್. ಇಟಗಿಮಠ, ಶಿವಾನಂದ ಕಟ್ಟಿಮನಿ ನಿರೂಪಿಸಿದರು.
ಧರ್ಮಸಭೆ
ಮಂಗಳವಾರ ಸಂಜೆ ರಥೋತ್ಸವದ ಬಳಿಕ ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಲಿಂ.ನಿರಂಜನ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಮತ್ತು ಧರ್ಮಸಭೆ ಜರುಗಿತು. ಅನ್ನದಾನೀಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ಜಾತ್ರೆ, ಹಬ್ಬ-ಹರಿದಿನಗಳು ಪರಸ್ಪರರಲ್ಲಿ ಸ್ನೇಹ, ಬಾಂಧವ್ಯ, ಸೌಹಾರ್ದತೆಯ ಭಾವನೆ ಬೆಸೆಯುತ್ತವೆ. ಜಾತ್ರೆಗಳ ಆಚರಣೆಯ ಸಂದರ್ಭದಲ್ಲಿ ಮo-ಮಾನ್ಯಗಳು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಸಮಾಜದ ಶ್ರೇಯೋಭಿವೃದ್ಧಿಗೆ ಮೂಲಾಧಾರವಾಗಿದೆ ಎಂದರು.