ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಓರ್ವ ಜಿಲ್ಲಾ ಮಟ್ಟದ ಅಧಿಕಾರಿ ಪ್ರಗತಿ ಪರಿಶೀಲನೆ ನಡೆಸುವುದಕ್ಕಾಗಿ ತಾಲೂಕಿಗೆ ಆಗಮಿಸಿದರೆ ಹಾಜರಿರಬೇಕಾದ ಅಧಿಕಾರಿಗಳಿಗೆ ಸಭೆಯ ಸಮಯ ಪಾಲನೆ ಇಲ್ಲ.
ಪೂರ್ವಾನುಮತಿ ಪಡೆಯದೇ ಸಭೆಗೆ ಗೈರು ಉಳಿಯುವುದು ಹೆಚ್ಚುತ್ತಿದೆ. ಹೀಗಾದರೆ ಸಭೆ ಹೇಗೆ ನಡೆಸಬೇಕು?
ಅಧಿಕಾರಿಗಳು ನಿಮ್ಮ ಮನಃಸಾಕ್ಷಿಗೆ ಒಪ್ಪುವ ರೀತಿಯಲ್ಲಿ ಕೆಲಸ ಮಾಡಿ ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ಶಿರಹಟ್ಟಿ ತಾ.ಪಂ ಆಡಳಿತಾಧಿಕಾರಿ ಎನ್.ಕೆ. ನಿರ್ಮಲಾ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಶಿರಹಟ್ಟಿ ತಾ.ಪಂ ಸಭಾಭವನದಲ್ಲಿ ಜರುಗಿದ ತಾ.ಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯು ನಿಗದಿಯಂತೆ ಪೂರ್ವಾಹ್ನ 11 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳು ಬರದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 11 ಗಂಟೆಯ ಒಳಗೆ ಆಗಮಿಸಿದ 15 ಜನ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಿಗಳಿಗೂ ನೊಟೀಸ್ ಜಾರಿ ಮಾಡಲು ತಾ.ಪಂ ಇಓ ಅವರಿಗೆ ಸೂಚಿಸಿದರು.
ಇಲಾಖಾವಾರು ಚರ್ಚೆ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಗಳಲ್ಲಿ ನೆಡಲಾಗಿರುವ ಗಿಡಗಳ ಬಗ್ಗೆ ಆರ್‌ಎಫ್‌ಓ ಕೌಶಿಕ್ ದಳವಾಯಿ ಮಾಹಿತಿ ನೀಡಿ, ತಾಲೂಕಿನಲ್ಲಿ 4 ಸಾವಿರ ಸಸಿಗಳನ್ನು ನೆಡಲಾಗಿದ್ದು, ಇದರಲ್ಲಿ ಶೇ.90ರಷ್ಟು ಸಸಿಗಳು ಬೆಳೆದಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಆಡಳಿತಾಧಿಕಾರಿಗಳು ಇವುಗಳ ವೀಕ್ಷಣೆ ಮಾಡುವಂತೆ ತಾ.ಪಂ ಇಓ ಎಸ್.ಎಸ್. ಕಲ್ಮನಿ ಅವರಿಗೆ ಸೂಚಿಸಿದರು.
ತಾ.ಪಂ ಇಓ ಎಸ್.ಎಸ್. ಕಲ್ಮನಿ, ಸಹಾಯಕ ತೋಟಗಾರಿಕೆ ನಿರ್ದೆಶಕ ಸುರೇಶ ಕುಂಬಾರ, ಸಮಾಜ ಕಲ್ಯಾಣಾಧಿಕಾರಿ ಶರಣಯ್ಯ ಹಿರೇಮಠ, ಬಿಸಿಎಂನ ಮರಿಗೌಡ ಸುರಕೋಡ, ಟಿಎಚ್‌ಓ ಸುಭಾಸ್ ದೈಗೊಂಡ, ಬಿಇಓ ನಾಯ್ಕ, ಎಡಿಎ ರೇವಣೆಪ್ಪ ಮನಗೂಳಿ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಪಶುವೈದ್ಯಾಧಿಕಾರಿ ಎನ್.ಎಚ್. ಓಲೇಕಾರ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನಲ್ಲಿಯ ವಸತಿ ನಿಲಯಗಳಿಗೆ ಯಾವುದೇ ಸಮಯದಲ್ಲಾದರೂ ಭೇಟಿ ನೀಡುತ್ತೇನೆ. ಭೇಟಿ ನೀಡಿದ ಸಂದರ್ಭದಲ್ಲಿ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗುವಂತಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ವಸತಿ ನಿಲಯಗಳಲ್ಲಿ ಸರಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಎಂದು ಆಡಳಿತಾಧಿಕಾರಿಗಳು ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.