ಖ್ಯಾತ ನಟ ದಳಪತಿ ವಿಜಯ್ ಸದ್ಯ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ತಮ್ಮ ಕೊನೆಯ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ವಿಜಯ್ ಸದ್ಯದಲ್ಲೇ ಚಿತ್ರರಂಗ ತೊರೆದು ರಾಜಕೀಯದಲ್ಲಿ ಬ್ಯುಸಿಯಾಗಲಿದ್ದಾರೆ. ಇದೀಗ ಶುಕ್ರವಾರ ಚೆನ್ನೈನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾದ ವಿಜಯ್ ಪ್ರಾರ್ಥನೆ ಸಲ್ಲಿಸಿದ್ದು ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಜಯ್ ಇಫ್ತಾರ್ ಕೂಟದಲ್ಲಿ ಭಾಗಿಯಾದ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.
ಚೆನ್ನೈನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ಇಫ್ತಾರ್ ಕೂಟ ಆಯೋಜಿಸಿದ್ದರು. ಇದರಲ್ಲಿ ವಿಜಯ್ ಟೋಪಿ ತೊಟ್ಟು, ಮುಸ್ಲಿಂ ಬಾಂಧವರೊಂದಿಗೆ ನಮಾಜ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಾಕಷ್ಟು ರೀತಿಯ ಕಾಮೆಂಟ್ ಹಾಕಿದ್ದಾರೆ. ಅಭಿಮಾನಿಗಳು ನಟನನ್ನು ಹೊಗಳುತ್ತಿದ್ದರೆ ಮತ್ತೊಂದಷ್ಟು ಮಂದಿ ಟೀಕಿಸುತ್ತಿದ್ದಾರೆ.
ವರದಿಗಳ ಪ್ರಕಾರ ವಿಜಯ್ ಅವರು ಮುಂಜಾನೆಯಿಂದ ಉಪವಾಸ ಮಾಡಿದ್ದರು ಎನ್ನಲಾಗಿದೆ. ನಂತರ ರಾತ್ರಿ ವೇಳೆ ಅವರು ಊಟ ಸೇವನೆ ಮಾಡಿದ್ದಾರೆ. ವಿಜಯ್ ಜೊತೆ ಹಲವು ಸ್ಥಳೀಯ ಮುಸ್ಲಿಂ ನಾಯಕರು ಭಾಗಿ ಆಗಿದ್ದಾರೆ. ವಿಜಯ್ ಅವರು ಭಾಗಿ ಆದ ಇಫ್ತಾರ್ ಕೂಟದಲ್ಲಿ 3 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ವಿಜಯ್ ಎಲ್ಲಾ ಧರ್ಮವನ್ನು ಗೌರವಿಸುತ್ತಿದ್ದಾರೆ ಎಂದು ಅಭಿಮಾನಿಗಳು ಸಂತಸ ಹೊರ ಹಾಕಿದರೆ ಅವರ ವಿರೋಧಿಗಳು ಇದು ‘ವೋಟ್ ಬ್ಯಾಂಕ್ ರಾಜಕೀಯ’ ಎಂದು ಟೀಕಿಸಿದ್ದಾರೆ.