ಗದುಗಿನ ಕೀರ್ತಿ ಬೆಳಗಿದ ಮಹನೀಯರು

0
vanijyodyama
Spread the love

ದಿ. ಶ್ರೀ ಸುರೇಶ ಸೋಮಯ್ಯ ಶಾಬಾದಿಮಠ: ಬಹು ಜನರ ಬದುಕು ಏಕತಾನತೆಯಂತೆ ಕಂಡರೂ ಕೆಲವರದು ಮಾತ್ರ ವಿಭಿನ್ನ ಮತ್ತು ವಿಶೇಷ. ಇತರರನ್ನು ಮೀರಿಸುವ ಅವರ ಬದುಕಿನ ಚಟುವಟಿಕೆಗಳು ನೋಡು ನೋಡುತ್ತಿರುವಂತೆ ಅವರು ಬೆಳೆಯುವ ರೀತಿ, ವಿಚಾರ ಸರಣಿಯ ವೇಗ, ಯೋಜನೆಗಳ ತಯಾರಿ, ವಯಸ್ಸನ್ನು ಮೀರಿದ ಹುಮ್ಮಸ್ಸು, ಬದುಕಿನ ಪ್ರೀತಿ ಎಲ್ಲದರಲ್ಲೂ ಕಾಮನಬಿಲ್ಲಿನಂತೆ, ಆಕರ್ಷಣೆ, ಗದುಗಿನ ಸುರೇಶ ಶಾಬಾದಿಮಠರು ಹೀಗೆಯೇ ಇದ್ದರು ಎನ್ನುವದಕ್ಕೆ ಈ ಮಾತು. ಯೋಜನೆ ಮತ್ತು ಯೋಜನೆಗಳ ಓಟವನ್ನು ಹೆಚ್ಚಿಸಿ, ಯಂತ್ರದಂತೆ ಮೆದುಳನ್ನು ಓಡಿಸಿ, ತಲೆತುಂಬ ವಿಚಾರಗಳನ್ನು ತುಂಬಿಕೊಂಡು, ಕೊಡುವದೊಂದನ್ನೇ ಅಭ್ಯಾಸ ಮಾಡಿಕೊಂಡು, ಗೆಳೆಯರ ಬಳಗದಲ್ಲಿ, ಸಾರ್ವಜನಿಕ ವಲಯದಲ್ಲಿ ಗದುಗಿನ ಪರಿಸರದಲ್ಲಿ ಪಾದರಸದಂತೆ ಓಡಾಡಿ, ಮಿಂಚುತ್ತ 44 ಬದುಕಿನ ಆರೋಹಣದ ಘಟ್ಟದಲ್ಲಿಯೇ ಮಸಣದತ್ತ ಪಯಣಿಸಿದರು, ಬಿತ್ತಿದ ಕನಸುಗಳೆಲ್ಲ ಚಿಗುರುವ ಮುನ್ನವೇ ಬತ್ತಿದವರು.

Advertisement

ಪುಸ್ತಕ ಮಾರಾಟ ಮತ್ತು ಪ್ರಕಾಶನ ಪ್ರಪಂಚದಲ್ಲಿ ಗದುಗಿನ ಪಿ.ಸಿ.ಶಾಬಾದಿಮಠರು ನಾಡಿಗೇ ಗೊತ್ತು. ಇವರ ಮೊಮ್ಮಗ, ಸೋಮಶೇಖರಯ್ಯನವರ ಮಗ ಸುರೇಶ ಜಸಿಸಿದ್ದು 1958 ಫೆಬ್ರುವರಿ 10ರಂದು. ಬಿ.ಕಾಂ ಪದವಿ ಪಡೆದು ಎರಡು ವರ್ಷ ಎಲ್.ಎಲ್.ಬಿ. ಅಭ್ಯಸಿಸಿದ ಸುರೇಶರೊಬ್ಬರೇ ಕುಟುಂಬದಲ್ಲಿ ಹೆಚ್ಚು ಕಲಿತದ್ದು, ಅಜ್ಜನಿಂದ ಬಳುವಳಿಯಾಗಿ ಬಂದಿದ್ದು ಪ್ರಕಾಶನ ಮತ್ತು ಪುಸ್ತಕ ವ್ಯಾಪಾರದಲ್ಲಿ ಕೂಡಿಕೊಂಡರು.

vanijyodyama                          vanijyodyama

ಪ್ರಿಂಟಿಂಗ್ ಮಾಧ್ಯಮ ಹಳೆಯತನದಲ್ಲಿತ್ತು, ಮೊದಲಿನಿಂದಲೂ ಚುರುಕಾಗಿ ಆಧುನಿಕತೆಯ ಬದಲಾವಣೆ ಕುರಿತು ವಿಚಾರಿಸುತ್ತಿದ್ದ ಇವರು, 1990ರಲ್ಲಿ ದೆಹಲಿಯಲ್ಲಿ ಏರ್ಪಟ್ಟ ಪ್ರದರ್ಶನದಲ್ಲಿ ಭಾಗವಹಿಸಿದರು ಹಾಗೂ 1990ರಲ್ಲಿ ಆಫ್‌ಸೆಟ್ ಯಂತ್ರ ಅಳವಡಿಸಿದರು.

ಲಿಯೋ ಕ್ಲಬ್ ಸದಸ್ಯರಾಗಿ, 1980-81ರಲ್ಲಿ ಅಧ್ಯಕ್ಷರಾಗಿ ಸಂಸ್ಥೆಗೆ ಹೊಸ ಚೇತನ, ಹುರುಪು ನೀಡಿದರು, ಆಂಗವಿಕಲರನ್ನು ಗುರುತಿಸಿ ಅವರಿಗೆ ಮಾಶಾಸನ ದೊರಕಿಸುವಲ್ಲಿ ಗೆಲವು ಸಾಧಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ಸದಸ್ಯರಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಚಿಕ್ಕ ವಯಸ್ಸಿನಲ್ಲಿ ಬಹುದೊಡ್ಡದಾಗಿ ಬೆಳೆದರು. ವಿದೇಶದಲ್ಲಿ ಪ್ರಿಂಟಿಂಗ್ ಮಾಧ್ಯಮ ಬೆಳೆದಿರುವ ರೀತಿಯನ್ನು 2001ರಲ್ಲಿ ಜರ್ಮನಿಗೆ ಹೋಗಿ ನೋಡಿ ತಿಳಿದುಕೊಂಡು ಬಂದರು.

2002 ಫೆಬ್ರುವರಿ 8ರಂದು ಬಹು ಜನರ ಮನಸ್ಸಿನಲ್ಲಿ ಹಸಿರಾಗಿದ್ದ ಸುರೇಶ ಶಾಬಾದಿಮಠರನ್ನು ಸಾವು ಅಪ್ಪಿಕೊಂಡಿತು. ಪಾದರಸದ ಹುಡುಗನ ಬದುಕಿನ ಹಡಗು ಮಧ್ಯದಲ್ಲಿಯೆ ಮುಳುಗಿತು. ಇವರ ನೆನಪಿಗಾಗಿ ಸಂಸ್ಥೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಲಿಂ. ಶ್ರೀ ಚಂದನಮಲ್ ಗುಲಾಬಚಂದ ಬಾಗಮಾರ ಕಿರು ಪರಿಚಯ: ಗಣ್ಯ ವ್ಯಾಪಾರಸ್ಥರು ಹಾಗೂ ಹಿರಿಯರಾದ ಚಂದನಮಲ್ ಗುಲಾಬಚಂದ ಬಾಗಮಾರ ಇವರು 10/05/1943ರಲ್ಲಿ ಜನಿಸಿ ತಮ್ಮ ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣವನ್ನು ನಗರದ ವಿದ್ಯಾದಾನ ಗಂಡು ಮಕ್ಕಳ ಶಾಲೆಯಲ್ಲಿ ಪೂರೈಸಿ ಮುಂದೆ 1958ರಲ್ಲಿ ತಂದೆಯವರಾದ ಗುಲಾಬಚಂದ ಅವರೊಂದಿಗೆ ಕೈಜೋಡಿಸಿ ವ್ಯಾಪಾರೋದ್ಯಮದ ಕಡೆಗೆ ಮುಖ ಮಾಡಿದರು.

ಆಗ ಗದಗ ಹತ್ತಿ ಅರಳಿ, ಶೇಂಗಾ ವ್ಯಾಪಾರದಲ್ಲಿ ಪ್ರಸಿದ್ಧಿಯಾಗಿತ್ತು. ಆದಾಗ್ಯೂ ಚಂದನಮಲ್ ಶಾಲೆ, ಕಾಲೇಜುಗಳಿಗೆ ಅವಶ್ಯವಾಗಿರುವ ಪರಿಕರಗಳನ್ನು ಪೂರೈಸುವ ಉದ್ಯೋಗವನ್ನು ಕೈಗೊಂಡರು.

ಅದರಲ್ಲಿಯೇ ತಮ್ಮ ವ್ಯವಹಾರವನ್ನು ಅಭಿವೃದ್ಧಿಗೊಳಿಸಿದರು. ಹೀಗೆ ಬಾಗಮಾರ ಕುಟುಂಬವು ವ್ಯಾಪಾರದಲ್ಲಿ ಉತ್ತಮವಾದ ಹೆಸರನ್ನು ಗಳಿಸಿಕೊಂಡಿದ್ದು ಚಂದನಮಲ್ಲ ಇವರು ಇವರು 7/10/2021ರಂದು ನಿಧನರಾದರು.

ದಿ. ಕುಂದನಮಲ್ ಧನರಾಜ ಶಹಾ, ಇವರ ಕಿರು ಪರಿಚಯ: ರಾಜಸ್ಥಾನದ ಅರಠವಾಡದಲ್ಲಿ ಧನರಾಜ ಶಹಾ-ಗುಲಾಬಿಬಾಯಿ ಇವರ ಜೇಷ್ಠ ಸುಪುತ್ರನಾಗಿ 5.11.1925ರಂದು ಜನಿಸಿದರು. ಕುಂದನಮಲ್ ಧನರಾಜ ಶಹಾ ಪ್ರಾಥಮಿಕ ಶಿಕ್ಷಣವನ್ನು ಗದಗ ನಗರದ ಮುನ್ಸಿಪಲ್ ಹೈಸ್ಕೂಲ್, ಸೈಂಟ್‌ಜಾನ್ ಸ್ಕೂಲ್‌ನಲ್ಲಿ ಪೂರೈಸಿ, ಮಾದ್ಯಮಿಕ ಶಿಕ್ಷಣವನ್ನು ವಿದ್ಯಾದಾನ ಗಂಡು ಮಕ್ಕಳ ಶಾಲೆಯಲ್ಲಿ ಪೂರೈಸಿದರು.

ತಮ್ಮ ಸಹೋದರರೊಂದಿಗೆ ತಮ್ಮದೇ ಆದ ದಿನಸಿ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದರು.

ನಂತರ ತಮ್ಮ ವ್ಯಾಪಾರ ಮತ್ತು ವ್ಯವಹಾರವನ್ನು ವಿಸ್ತರಿಸಿ, 1965ರಲ್ಲಿ ಬಾಂಬೆ ಕ್ಲಾಥ್ ಸ್ಟೋರ್ಸ್ ಪ್ರಾರಂಭಿಸಿದರು. ಮಕ್ಕಳಿಗೆ ಸಮಾಜದಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡುವ ಮೂಲಕ ವ್ಯಾಪಾರದಲ್ಲಿ ತೊಡಗುವಂತೆ ಮಾಡಿದ್ದಾರೆ. 1969ರಲ್ಲಿ ಸಹೋದರರೊಂದಿಗೆ ಸೇರಿ 600 ಜನರನ್ನು 13 ದಿನಗಳ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ತೀರ್ಥ ಯಾತ್ರೆಯನ್ನು ಮಾಡಿಸುವ ಮೂಲಕ ಸಮಾಜದಲ್ಲಿ ತಮ್ಮದೇ ಆದ ಹೆಸರು ಉಳಿಯುವಂತೆ ನೋಡಿಕೊಂಡಿದ್ದಾರೆ. ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮದೇ ಆದ ಅನುಪಮವಾದ ಸೇವೆಯನ್ನು ಸಲ್ಲಿಸಿ, 1990 ಅಗಸ್ಟ 10ರಂದು ನಿಧನರಾದರು. ಇವರ ಸವಿನೆನಪಿಗಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ದತ್ತಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.


Spread the love

LEAVE A REPLY

Please enter your comment!
Please enter your name here