ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಾ ಯೋಜನೆಅಡಿಯಲ್ಲಿ ಇರುವ ಯೋಜನೆಗಳ ಲಾಭ ಪಡೆಯಲು ನರೇಗಾ ಜಾಬ್ ಕಾರ್ಡ್ ಹೊಂದಿರುವವರು ತಕ್ಷಣ ಇ-ಕೆವೈಸಿ ಮಾಡಿಸಬೇಕೆಂದು ಅಬ್ಬಿಗೆರೆ ಗ್ರಾ.ಪಂ ಪಿಡಿಒ ಲೋಹಿತ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೊದಲ ಹಂತದಲ್ಲಿ ರಾಜ್ಯದಲ್ಲಿ ಇದನ್ನು ಐದು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ನರೇಗಾ ಜಾಬ್ ಕಾರ್ಡ್ ಹೊಂದಿರುವ ಎಲ್ಲ ನಾಗರಿಕರು ಅಕ್ಟೋಬರ್ 30ರೊಳಗೆ ನಿಮ್ಮ ಜಾಬ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಬಂದು ಸುಲಭವಾಗಿ ಕೆವೈಸಿ ಮಾಡಿಸಬಹುದೆಂದು ತಿಳಿಸಿದ್ದಾರೆ.
ಇ-ಕೆವೈಸಿ ಮಾಡಿಸುವುದರಿಂದ ನಿಮಗೆ ಪ್ರತಿ ದಿನಕ್ಕೆ 370ರೂ. ನಂತೆ ವರ್ಷಕ್ಕೆ 100 ದಿನಗಳ ಉದ್ಯೋಗ ಸಿಗುತ್ತದೆ. ನರೇಗಾ ಯೋಜನೆಯಡಿಯಲ್ಲಿ ಎಲ್ಲ ಲಾಭಗಳನ್ನೂ ಪಡೆದುಕೊಳ್ಳಬಹುದು. ಹೊಸದಾಗಿ ಯಾರಾದರೂ ಅರ್ಜಿ ಸಲ್ಲಿಸುವವರಿದ್ದರೆ ನಿಮ್ಮ ರೇಷನ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್, ಆಧಾರ್ ಕಾರ್ಡ್, ಫೋಟೋ ತೆಗೆದುಕೊಂಡು ಬಂದು ಹೊಸ ಕಾರ್ಡ್ ಮಾಡಿಸಬಹುದೆಂದಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಕಾರ್ಡ್ ಹೊಂದಿರುವವರು ಬೇಗನೆ ಇ-ಕೆವೈಸಿ ಮಾಡಿಸಿರಿ ಎಂಬ ಜಾಗೃತಿಯನ್ನು ಮೂಡಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರಾಠೋಡ, ಉಪಾಧ್ಯಕ್ಷೆ ತೆಗ್ಗಿನಕೇರಿ ಮತ್ತಿತರ ಎಲ್ಲ ಸದಸ್ಯರು, ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು, ಘೋಷಣಾ ಪತ್ರಗಳನ್ನು ಪ್ರದರ್ಶಿಸಿದರು.