ಅಕ್ರಮ ದಂಧೆಕೋರರಿಗೆ ಕಡಿವಾಣ ಹಾಕಲು ಸಿದ್ಧವಾಗುತ್ತಿದೆ ಆಹಾರ ಇಲಾಖೆಯ ಹೊಸ ಕ್ರಮ `ಅನ್ನಭಾಗ್ಯ’ ಕಳ್ಳರಿಗೆ ಕಾದಿದೆ ಆಪತ್ತು…!?

0
Spread the love

ಗದಗ: ಬಡ ಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ. ಆದರೆ, ಹಲವೆಡೆ, ಈ ಅನ್ನಭಾಗ್ಯ ಯೋಜನೆಯ ಅಕ್ಕಿ ಬಡವರ ಹೊಟ್ಟೆ ತುಂಬುವ ಬದಲಾಗಿ, ಕಾಳದಂಧೆ ನಡೆಸುವವರ ಜೇಬು ಮಾತ್ರ ಭರ್ತಿಯಾಗಿಯೇ ತುಂಬಿಸುತ್ತಿದೆ. ಇದಕ್ಕೆ ಗದಗ ಜಿಲ್ಲೆಯೂ ಹೊರತಾಗಿಲ್ಲ.

Advertisement

ಈ ಹಿಂದೆಯೂ ಅನೇಕ ಬಾರಿ ಈ ಅಕ್ರಮಕ್ಕೆ ಬ್ರೇಕ್ ಹಾಕಲು ಇಲಾಖೆ ಮುಂದಾಗಿ ಕ್ರಮ ಕೈಗೊಂಡರೂ ಕೂಡ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲವೆಂಬುದೂ ಸತ್ಯವೇ.

ಪದೇ ಪದೇ ಅಕ್ರಮವಾಗಿ ಅಕ್ಕಿ ಸಾಗಾಟದಲ್ಲಿ ತೊಡಗಿಕೊಂಡ ಖದೀಮರನ್ನು ಗಡಿಪಾರು ಮಾಡಬೇಕು ಇಲ್ಲವೇ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಆಹಾರ ಇಲಾಖೆ ಸಜ್ಜಾಗಿರುವುದು ದಂಧೆಕೋರರಲ್ಲಿ ಭಯ ಹುಟ್ಟಿಸಿದೆ.

ಗದಗ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆಗೆ ಕಡಿವಾಣ ಇಲ್ಲದಂತಾಗಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲೇ ಅಕ್ರಮ ಅಕ್ಕಿ ಸಾಗಾಟಕ್ಕೆ ಸಂಬಂಧಿಸಿ ಒಂದು ವಾರದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದರೆ, ಈ ದಂಧೆ ಯಾವ ಮಟ್ಟಕ್ಕೆ ಬೆಳೆದಿರಬಹುದು ಎಂದು ಅಂದಾಜಿಸಬಹುದು.

ಈ ದಂಧೆಕೋರರು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ನಡೆಸಿದ್ದಾರೆ.

ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ರಾತ್ರೋರಾತ್ರಿ ವಾಹನಗಳಲ್ಲಿ ತುಂಬಿ ಸಾಗಾಟ ಮಾಡಲಾಗುತ್ತಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆ, ಬೆಟಗೇರಿ ಪೊಲೀಸ್ ಠಾಣೆ ಹಾಗೂ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ.

ವಾಹನಗಳಲ್ಲಿ ಸಾಗಾಟ ಹಾಗೂ ಮನೆಯಲ್ಲಿ ಅಕ್ರಮ ಸಂಗ್ರಹ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತಹಸೀಲ್ದಾರ, ಆಹಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸಂಗ್ರಹಿಸಿಟ್ಟಿದ್ದ ಅಕ್ಕಿ ದಾಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ದಾಖಲಾದ ನಾಲ್ಕು ಪ್ರಕರಣಗಳಲ್ಲಿ ನೂರಾರು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ವಿಜಯಕುಮಾರ ಮಟ್ಟಿ, ವೀರಣ್ಣ ಬಡಿಗೇರ, ಶಿವಾನಂದ ಬಡಿಗೇರ, ಖಾಜಾಹುಸೇನ್ ಖಾದರನ್ನವರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಏಪ್ರಿಲ್‌ನಿಂದ ಇಲ್ಲಿಯವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿರುವ ಬಗ್ಗೆ ಆಹಾರ ಇಲಾಖೆ ತಿಳಿಸಿದೆ. ಈ ಎಲ್ಲ ಅಕ್ರಮಕ್ಕೆ ಕಡಿವಾಣ ಹಾಕಲು ಆಹಾರ ಇಲಾಖೆ ಸಜ್ಜಾಗುತ್ತಿದ್ದು, ಪದೇ ಪದೇ ಇಂಥದೇ ಪ್ರಕರಣಗಳಲ್ಲಿ ಶಾಮೀಲಾದ ದಂಧೆಕೋರರ ಪಟ್ಟಿ ಸಿದ್ಧಪಡಿಸುತ್ತಿದ್ದು, ಇಂಥ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಇಲ್ಲವೇ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಆಹಾರ ಇಲಾಖೆ ಉಪನಿರ್ದೇಶಕರು ಹೇಳಿದ್ದಾರೆ.

ಕಳೆದ ಬಾರಿ ಅಕ್ರಮ ಅಕ್ಕಿ ದಂಧೆಕೋರನೊಬ್ಬ ಡಿಸಿ, ಎಸ್‌ಪಿಯವರಿಗೂ ನಾನೂ ಕೇರ್ ಮಾಡುವುದಿಲ್ಲ, ಯಾರಿಗೆ ಹೇಳ್ತೀರಿ ಹೇಳಿ ಎಂದು ಧಮಕಿ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಕ್ರಮ ಅಕ್ಕಿ ದಾಸ್ತಾನು ಮಾಹಿತಿ ನೀಡಿದವರಿಗೆ ಬೆದರಿಕೆ ಹಾಕಿದ ಪ್ರಕರಣಗಳೂ ವರದಿಯಾಗಿದ್ದವು. ಇಂಥವರ ವಿರುದ್ಧ ಶಿಸ್ತಿನ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ನಿಜವಾದ ಫಲಾನುಭವಿಗಳ ಹೊಟ್ಟೆ ಸೇರುತ್ತದೆ, ಸರ್ಕಾರದ ಆಶಯವೂ ಇಡೇರಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಬೇಕಿದೆ.


Spread the love

LEAVE A REPLY

Please enter your comment!
Please enter your name here