‘ಬಿಗ್ ಬಾಸ್ ಕನ್ನಡ ಸೀಸನ್ ೧೨’ ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸಮೀಪತೆ ಇದೀಗ ಕಿರಿಕಿರಿ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಶೋ ಆರಂಭದಿಂದಲೂ ಇಬ್ಬರ ಆತ್ಮೀಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಕಾವ್ಯಾ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಚ್ಚ ಸುದೀಪ್ ಈಗಾಗಲೇ ಸೂಚಿಸಿದ್ದರು.
ಡಿಸೆಂಬರ್ ೨೨ರ ಸಂಚಿಕೆಯಲ್ಲಿ ಗಿಲ್ಲಿ ನಟ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದು, ಕಾವ್ಯಾ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಬೇಡ ಎಂದರೂ ಕೂಡ ಗಿಲ್ಲಿ ಮುಗಿಬಿದ್ದು ಮಾತನಾಡಲು ಮುಂದಾದರು. ಈ ಹಿಂದೆ ಹಲವು ಬಾರಿ ಗಿಲ್ಲಿ ವರ್ತನೆಯಿಂದ ಕಿರಿಕಿರಿ ಆಗಿದೆ ಎಂದು ಕಾವ್ಯಾ ನೇರವಾಗಿಯೇ ಹೇಳಿದ್ದರು. “ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದರೂ ಗಿಲ್ಲಿ ಅರ್ಥ ಮಾಡಿಕೊಂಡಂತೆ ಕಾಣಿಸಲಿಲ್ಲ.
೮೬ನೇ ಸಂಚಿಕೆಯಲ್ಲಿ ಅಡುಗೆ ಮನೆಯಲ್ಲಿ ನಡೆದ ಘಟನೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ದಾಳಿಂಬೆ ಹಣ್ಣು ಬಿಡಿಸುತ್ತಿದ್ದ ಕಾವ್ಯಾ ಬಳಿ ಬಂದ ಗಿಲ್ಲಿ ತಮಾಷೆ ಆರಂಭಿಸಿದರು. ಕತ್ತರಿ ಹಿಡಿದು ಕೂದಲು ಕತ್ತರಿಸುವಂತೆ ನಟಿಸಿದ್ದು ಕಾವ್ಯಾ ಅವರಿಗೆ ಹಿಡಿಸಲಿಲ್ಲ. ಜೊತೆಗೆ ದಾಳಿಂಬೆ ಹಣ್ಣನ್ನು ಬಲವಂತವಾಗಿ ತೆಗೆದುಕೊಳ್ಳಲು ಯತ್ನಿಸಿದುದು ಕಾವ್ಯಾ ಅವರ ಕೋಪಕ್ಕೆ ಕಾರಣವಾಯಿತು.
ಇದರಿಂದ ಬೇಸರಗೊಂಡ ಕಾವ್ಯಾ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮಿಗೆ ತೆರಳಿದರು. ಅವರು ತುಂಬಾ ಮನನೊಂದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿತು. ನಂತರ ಗಿಲ್ಲಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಪರಿಸ್ಥಿತಿ ತಣ್ಣಗಾಗಲಿಲ್ಲ.
ಈ ವಾರ ಕಾವ್ಯಾ ಶೈವ ಕ್ಯಾಪ್ಟನ್ ಆಗಿದ್ದು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯಾ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರವಾಗುತ್ತಿದೆ.



