ಕಲಬುರಗಿ: ಇಲ್ಲಿನ ಪ್ರತಿಷ್ಟಿತ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಶನಿವಾರ ಸಂಜೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಐಸಿಯುನಲ್ಲಿದ್ದ ರೋಗಿಗಳು ಪರದಾಡುವಂತಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗಿದೆ. ಇನ್ನೂ ಈ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಮೊನ್ನೆ ಐಸಿಯೂ ವಾರ್ಡ್ನಲ್ಲಿ ವಿದ್ಯುತ್ ಸಮಸ್ಯೆ ಆಗಿತ್ತು. ತಕ್ಷಣವೇ ವಿದ್ಯುತ್ ಬಂದಿದೆ. ಹೀಗಾಗಿ ಯಾವುದೇ ತೊಂದರೆಯಾಗಿಲ್ಲ. ತಾಂತ್ರಿಕ ದೋಷದಿಂದ ವಿದ್ಯುತ್ ಟ್ರಿಪ್ ಆಗಿತ್ತು. ಆದರೆ ಅಕ್ಸಿಜನ್ ಕೊರತೆಯಿರಲಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಜೆಸ್ಕಾಂ ಎಂಡಿ ಜೊತೆ ಮಾತನಾಡಿದ್ದೇನೆ. ಜಿಮ್ಸ್ಗೆ ಪ್ರತ್ಯೆಕ ಎಇಇ ನೇಮಕ ಮಾಡುವಂತೆ ಸೂಚನೆ ನೀಡಿದ್ದೇನೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ನಮಗೆ ಖಾಯಂ ಎಇಇ ಅವಶ್ಯಕತೆಯಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಅದಲ್ಲದೆ ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರೆಗಳ ಕೈವಾಡ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯ ದಕ್ಷತೆಯನ್ನು ಅವರಿಗೆ (ಖಾಸಗಿ ಆಸ್ಪತ್ರೆಗಳು) ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ಖಾಸಗಿ ಆಸ್ಪತ್ರೆ ಲೋಗೊ ಇದೆ ಎಂದು ಆರೋಪ ಮಾಡಿದ್ದಾರೆ.