ದರ್ಶನ್ ನಟನೆಯ ನವಗ್ರಹ ಚಿತ್ರದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತ ಗಿರಿ ದಿನೇಶ್ ದಿವಂಗತ ನಟ ದಿನೇಶ್ ಅವರ ಪುತ್ರ. ನವಗ್ರಹ ಚಿತ್ರದಲ್ಲಿ 9 ಖಳನಟರ ಪುತ್ರರಲ್ಲಿ ಗಿರಿ ಕೂಡ ಒಬ್ಬರು. ಚಮ್ಕಾಯ್ಸು ಚಿಂದಿ ಉಡಾಯ್ಸು ಚಿತ್ರದಲ್ಲೂ ಅವರು ನಟಿಸಿದ್ದರು. ಅವರಿಗೆ ಹೆಚ್ಚಿನ ಸಿನಿಮಾ ಅವಕಾಶ ಸಿಕ್ಕಿರಲಿಲ್ಲ.
ನವಗ್ರಹ ರೀರಿಲೀಸ್ ವೇಳೆ ಸಂಪರ್ಕ ಮಾಡಿದ್ದಾಗಲೂ ಕ್ಯಾಮೆರಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರಂತೆ. ಅವಕಾಶಗಳ ಕೊರತೆಯಿಂದ ಗಿರಿ ದಿನೇಶ್ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಇದೀಗ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿತು. ಏಕಾಏಕಿ ಕುಸಿದು ಬಿದ್ದ ಗಿರಿ ದಿನೇಶ್ ಅವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಗಿರಿ ದಿನೇಶ್ ನಿಧನರಾಗಿದ್ದಾರೆ. ಇಂದು ಗಿರಿ ದಿನೇಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.