ಬೆಳಗಾವಿ: ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಶೇ 50 ರಷ್ಟು ಡೆಂಗ್ಯೂ ಪ್ರಕರಣಗಳಿವೆ. ಇದರ ಬೆನ್ನಲ್ಲಿಯೇ ಬೆಳಗಾವಿಯ ಜಿಲ್ಲಾಸ್ಪತ್ರೆಯ ಶಂಕಿತ ಡೆಂಗ್ಯೂ ಜ್ವರದಿಂದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. 14 ವರ್ಷದ ಪ್ರಣಾಲಿ ಹುಂದ್ರೆ ಮೃತ ಬಾಲಕಿ, ಭಾನುವಾರ ಬಾಲಕಿಗೆ ಒಂದೆರಡು ಸಲ ವಾಂತಿ – ಭೇದಿ ಆಗಿದ್ದು, ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಮಂಗಳವಾರ ತೀವ್ರ ಜ್ವರದ ಹಿನ್ನೆಲೆಯಲ್ಲಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ ಬಾಲಕಿ ಕೊನೆಯುಸಿರೆಳೆದಿದ್ದಾರೆ. ರಕ್ತದ ಮಾದರಿ ತಪಾಸಣೆ ಮಾಡಿದಾಗ ಶಂಕಿತ ಡೆಂಗ್ಯೂ ಪತ್ತೆಯಾಗಿದೆ. ಬಾಲಕಿಯು ಹೊನಗಾದ ಮರಾಠಾ ಮಂಡಳ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಜಿಲ್ಲಾಸ್ಪತ್ರೆ ಆವರಣದಲ್ಲಿ ಮೃತ ಬಾಲಕಿಯ ತಂದೆ, ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.



