ಬಾಲಕಿಗೆ ದ್ವಿಚಕ್ರ ವಾಹನ ಹಾಯ್ದು ಗಾಯ: ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್ ನಂ.11ರ ಮಸಜೀದ್ ಗಲ್ಲಿಯಲ್ಲಿ ಮಂಗಳವಾರ ಸಂಜೆ 13 ವರ್ಷದ ಬಾಲಕಿಗೆ ದ್ವಿಚಕ್ರ ವಾಹನ ಸವಾರನೋರ್ವ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಾಯಗೊಂಡಿದ್ದರಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿರಿಸಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಮುಖಂಡ ದಾದಾಪೀರ ತಂಬಾಕದ, ನಗರೋತ್ಥಾನ ಅನುದಾನದಲ್ಲಿ ಬಳಿಗಾರ ಓಣಿಯಿಂದ ಸೋಮೇಶ್ವರ ತೇರಿನ ಮನೆಯವರೆಗಿನ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ 2 ವರ್ಷಗಳ ಕಾಲ ತೆಗೆದುಕೊಳ್ಳಲಾಯಿತು. ಹೋರಾಟ, ಪ್ರತಿಭಟನೆ, ಎಚ್ಚರಿಕೆಯ ಪರಿಣಾಮವಾಗಿ ಇತ್ತೀಚೆಗೆ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ ಈ ರಸ್ತೆಯಲ್ಲಿ ಸಾಕಷ್ಟು ತಿರುವುಗಳಿದ್ದು, ನಿತ್ಯ ಅನೇಕ ವಾಹನಗಳು ಓಡಾಡುವದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಡಾಂಬರೀಕರಣ ಮುಗಿದ ತಕ್ಷಣ ರಸ್ತೆಯ ತಿರುವುಗಳಿದ್ದಲ್ಲಿ ರಸ್ತೆ ಅಡೆತಡೆಗಳನ್ನು ಹಾಕುವಂತೆ ಮನವಿ ಮಾಡಲಾಗಿತ್ತು.

2 ತಿಂಗಳಲ್ಲಿ ಸುಮಾರು 5-6 ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಅಲ್ಲದೆ ಮರಳು ಸಾಗಾಣಿಕೆದಾರರು ಒಳ ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗುವದಕ್ಕೆ ಈ ರಸ್ತೆ ಅನೂಕೂಲ ಮಾಡಿಕೊಟ್ಟಂತಾಗಿದೆ. ಟ್ರ್ಯಾಕ್ಟರ್‌ ಗಳು ವೇಗವಾಗಿ ಸಾಗುವದರಿಂದ ಇಲ್ಲಿ ಅಡ್ಡಾಡುವ ಮಕ್ಕಳು, ವೃದ್ಧರು ಭಯದಲ್ಲಿ ಬದುಕುವಂತಾಗಿದೆ. ರಸ್ತೆ ಅಡೆ-ತಡೆಗಳಿದ್ದಲ್ಲಿ ಅಪಘಾತಗಳನ್ನು ನಿಯಂತ್ರಿಸಬಹುದಾಗಿದ್ದು, ನಮ್ಮ ಮನವಿಗೆ ಪುರಸಭೆಯವರು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ನಾಗರಾಜ ಗಡಾದ ಪರಿಸ್ಥಿತಿಯನ್ನು ತಿಳಿಗೊಳಿಸಿ ರಸ್ತೆ ತಡೆ ತೆರವುಗೊಳಿಸಿದರು. ಮುಖ್ಯಾಧಿಕಾರಿಗಳು 2-3 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಾದಾಪೀರ ನಾಲಬಂದ, ಪ್ರಕಾಶ ಕುಂದಗೋಳ, ಸಾದಿಕ್ ಡಾಲಾಯತ್, ಮಹಾಬೂಬಸಾಬ್ ಗುತ್ತಲ, ಮೌಲಾಲಿ ಶಿರಹಟ್ಟಿ, ಮಲ್ಲಿಕ್ ಹುಬ್ಬಳ್ಳಿ, ಮೌಲಾಲಿ ಮುದಗಲ್ ಭಾಷಾ ತಂಬಾಕ, ಬಶೀರ್ ಟಪಾಲ್, ರಿಹಾನ್ ಡಾಲಾಯತ್ ಮುಂತಾದವರಿದ್ದರು.

ಪುರಸಭೆ ಅಧಿಕಾರಿಯ ಮೇಲೆ ಆರೋಪ

ಪುರಸಭೆ ಮುಖ್ಯಾಧಿಕಾರಿಗಳಿಗೆ ಈ ರಸ್ತೆಯಲ್ಲಿ ಅಡೆ-ತಡೆಗಳನ್ನು ನಿರ್ಮಿಸುವಂತೆ ಪದೇ ಪದೇ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದಸ್ಯರ ಮಾತುಗಳನ್ನು ಮುಖ್ಯಾಧಿಕಾರಿ ಗಮನಕ್ಕೆ ತೆಗೆದುಕೊಳ್ಳದೆ ಎಲ್ಲವನ್ನೂ ನಿರ್ಲಕ್ಷ್ಯ ಮಾಡುತ್ತಾರೆ ಎಂದು ವಾರ್ಡ್ ನಂ.11ರ ಪುರಸಭೆ ಸದಸ್ಯ ಸಿಕಂದರ ಕಣಕೆ ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here