ವಿಜಯಸಾಕ್ಷಿ ಸುದ್ದಿ, ಗದಗ: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಸರಕಾರ ಜಾರಿಗೆ ತಂದಿರುವ ನಿಯಮಾವಳಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಗುರುವಾರ ಜರುಗಿದ ಲೇವಾದೇವಿ, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವ ಘಟನೆಗಳ ವರದಿಗಳು ಬರುತ್ತಿವೆ. ಸಾಲ ಮರುಪಾವತಿಗೆ ಸೂಚನೆ ನೀಡಲು ಕಾಯ್ದೆಯಡಿಯಲ್ಲಿನ ನಿಯಮಾವಳಿಗಳನ್ನು ಉಲ್ಲಂಘಿಸುವ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಲಾಗುವದು ಎಂದು ಹೇಳಿದರು.
ಸರಕಾರ ಜಾರಿಗೊಳಿಸಿರುವ ಆದ್ಯಾದೇಶ ಸಾಲ ಕೊಡುವರಿಗೆ ಹಾಗೂ ಪಡೆಯುವವರಿಗೆ ಅನುಕೂಲವಾಗುವ ಕಾಯ್ದೆಯಾಗಿದ್ದು, ಅಧಿಕೃತ ಹಾಗೂ ಅಧಿಕೃತವಲ್ಲದ ಲೇವಾದೇವಿದಾರರಿಗೆ ಸೂಚನೆಗಳನ್ನು ನೀಡುವ ಉದ್ದೇಶದೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿದೆ. ಸಾಲ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಸಾಲ ನೀಡಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜಿಲ್ಲೆಯ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿಯಾಗಬೇಕು ಎಂದು ತಿಳಿಸಿದರು.
ಮೈಕ್ರೋ ಪೈನಾನ್ಸ್ ಸಂಸ್ಥೆಗಳು ವಿಧಿಸಲಾದ ಪರಿಣಾಮಕಾರಿ ಬಡ್ಡಿ ದರವನ್ನು ತಮ್ಮ ಎಲ್ಲಾ ಕಚೇರಿಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರದರ್ಶಿಬೇಕು. ಅಲ್ಲದೇ ಸಾಲಗಾರರೊಂದಿಗಿನ ಎಲ್ಲ ವ್ಯವಹಾರಗಳು ಕನ್ನಡದಲ್ಲಿರಬೇಕು. ಸಾಲದ ಅರ್ಜಿ ನಮೂನೆಯಲ್ಲಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾದ ಅವಶ್ಯಕ ದಸ್ತಾವೇಜುಗಳನ್ನು ಸೂಚಿಸುವದರ ಜೊತೆಗೆ ಪ್ರತಿಯೊಂದು ಸಾಲ ನೀಡಿಕೆ ಏಜೆನ್ಸಿ ಎಂ.ಎಫ್.ಆಯ್ ಸಂಸ್ಥೆಗಳು, ಲೇವಾದೇವಿದಾರರು ನಗದು ಪುಸ್ತಕ, ಖಾತಾ ಪುಸ್ತಕ ಮತ್ತು ನಿರ್ದಿಷ್ಟಪಡಿಸಬಹುದಾದ ಇತರೆ ಲೆಕ್ಕ ಪುಸ್ತಕಗಳನ್ನು ಇಟ್ಟು ನಿರ್ವಹಿಸಬೇಕು. ಪ್ರತಿ ತ್ರೈಮಾಸಿಕ ಹಾಗೂ ವಾರ್ಷಿಕ ವರದಿಯನ್ನು ನೀಡಬೇಕು.
ಸಾಲಗಾರನಿಗೆ ಪ್ರತಿಯೊಂದು ಸಾಲ ನೀಡಿಕೆ ಏಜೆನ್ಸಿ, ಎಂ.ಎಫ್.ಆಯ್ ಸಂಸ್ಥೆಗಳು, ಲೇವಾದೇವಿದಾರರ ಕಾರ್ಯನಿರ್ವಾಹಕರ ಹೆಸರು ಮತ್ತು ವಿಳಾಸ, ಸಾಲದ ಮೊತ್ತ, ದಿನಾಂಕ ಹಾಗೂ ಅದರ ವಾಯಿದೆ ಮತ್ತು ವಿಧಿಸಲಾದ ಪರಿಣಾಮಕಾರಿ ಬಡ್ಡಿ ದರ ತೋರಿಸುವ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿನ ವಿವರ ಪಟ್ಟಿಯನ್ನು ತಲುಪಿಸಬೇಕು. ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದುವದರ ಜೊತೆಗೆ ಸಾಲಗಾರನಿಗೆ ಸಂಸ್ಥೆ ಅಥವಾ ಏಜೆನ್ಸಿಯ ಅಧಿಕೃತ ಪ್ರತಿನಿಧಿಯು ಯುಕ್ತವಾಗಿ ಸಹಿಮಾಡಿದ ರಸೀದಿಯನ್ನು ನೀಡಬೇಕು ಎಂದರು.
ಸಾಲ ನೀಡಿಕೆ ಏಜೆನ್ಸಿ, ಎಂ.ಎಫ್.ಆಯ್ ಸಂಸ್ಥೆಗಳು, ಲೇವಾದೇವಿದಾರರಿಂದ ಸರಕಾರದ ಆದ್ಯಾದೇಶ ಉಲ್ಲಂಘನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸರ್ಕಾರದ ಮೂಲಕ ಒಂಬುಡ್ಸಮನ್ ನೇಮಕ ಮಾಡಲಾಗುವದು. ಯಾವುದೇ ಕಾರಣಕ್ಕೂ ಸಾಲ ತೀರುವಳಿಗಾಗಿ ಸಾಲಗಾರನಿಗರ ಅಥವಾ ಅವರ ಕುಟುಂಬಸ್ಥರಿಗೆ ಬಲವಂತದ ಕ್ರಮ ಕೈಗೊಳ್ಳದಂತೆ ತಿಳಿಸಿದ ಜಿಲ್ಲಾಧಿಕಾರಿ, ಆದ್ಯಾದೇಶವನ್ನು ಉಲ್ಲಂಘಿಸುವವರಿಗೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜಾಮೀನು ರಹಿತ ಕಾರಾಗೃಹ ವಾಸದೊಂದಿಗೆ ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡನಗೊಳ ಪಡಿಸಲಾಗುವದು ಹಾಗೂ ತ್ರೈಮಾಸಿಕ ತ:ಖ್ತೆ ಮತ್ತು ವಾರ್ಷಿಕ ತ:ಖ್ತೆಯನ್ನು ಸಲ್ಲಿಸಲು ವಿಫಲವಾದ ಎಂಎಫ್.ಆಯ್ ಅಥವಾ ಸಾಲ ನೀಡಿಕೆ ಏಜೆನ್ಸಿ, ಲೇವಾದೇವಿದಾರನಿಗೆ ಆರು ತಿಂಗಳು ಜೈಲು ವಾಸ ಹಾಗೂ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ದಂಡನೆಗೊಳಪಡಿಸಲಾಗುವದು ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಸ್.ಎಸ್. ಕಬಾಡಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಸಂತೋಷ ಎಂ.ವಿ, ಆರ್.ಬಿ. ಆಯ್ ಮ್ಯಾನೇಜರ್ ಶೀಲಪ್ರಿಯ ಗೌತಮ ಸೇರಿದಂತೆ ಜಿಲ್ಲೆಯ ಸಾಲ ನೀಡಿಕೆ ಏಜೆನ್ಸಿ, ಎಂ.ಎಫ್.ಆಯ್ ಸಂಸ್ಥೆಗಳು, ಲೇವಾದೇವಿದಾರರು ಹಾಜರಿದ್ದರು.
ನೋಂದಣಿ ಮತ್ತು ನವೀಕರಣ
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟ ಪಡಿಸಬಹುದಾದ ವಿಧಾನದಲ್ಲಿ ಒಂದು ವರ್ಷದ ಅವಧಿಗಾಗಿ ನೋಂದಣಿಯನ್ನು ಮಾಡಲಾಗುವದು. ನೊಂದಣಿಯ ನವೀಕರಣಕ್ಕಾಗಿ ಒಂದು ವರ್ಷದ ಮುಕ್ತಾಯಗೊಳ್ಳುವ ಮೊದಲು ಅರವತ್ತು ದಿನಗೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು, ಸಂಸ್ಥೆಗಳ ಕ್ಷೇತ್ರ ಮಟ್ಟದ ಕಾರ್ಯಕ್ಷಮತೆಯ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಆಲಿಸಿದ ತರುವಾಯ ನೊಂದಣಿ ನವೀಕರಣ ಮಂಜೂರು ಅಥವಾ ನಿರಾಕರಿಸಲಾಗುವುದು.
ಮೈಕ್ರೋ ಫೈನ್ಸಾನ್, ಗಿರವಿದಾರರು ಹಾಗೂ ಲೇವಾದೇವಿದಾರರ ಸಭೆಯನ್ನು ಈಗಾಗಲೇ ಜರುಗಿಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಸಾಲ ನೀಡುವಾಗ ಹಾಗೂ ವಸೂಲಿ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಈ ಕುರಿತು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಸಾಲ ವಸೂಲಾತಿ ಸಂದರ್ಭದಲ್ಲಿ ಯಾವುದೇ ತೊಂದರೆಗಳು ಎದುರಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
– ಬಿ.ಎಸ್. ನೇಮಗೌಡ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.