ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ನೇತೃತ್ವದಲ್ಲಿ ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ರೋಣ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

Advertisement

ರೋಣ ಬಸ್ ನಿಲ್ದಾಣದ ಆವರಣವನ್ನು ಪರಿಶೀಲಿಸಿದ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಆಗಸ್ಟ್ 5ರಂದು ಪುನಃ ಬಸ್ ನಿಲ್ದಾಣಕ್ಕೆ ಪರಿಶೀಲನೆಗಾಗಿ ಆಗಮಿಸುವೆ. ಆ ಸಂದರ್ಭದಲ್ಲಿ ಬಸ್ ನಿಲ್ದಾಣ ಆವರಣ ಶುಚಿಯಾಗಿರಬೇಕು. ನಿಲ್ದಾಣದಲ್ಲಿನ ಸಾರ್ವಜನಿಕರಿಗೆ ಕೂರಲು ಉತ್ತಮ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ನಿಲ್ದಾಣ ಆಗಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮಗಳಿಂದ ರೋಣ ಪಟ್ಟಣಕ್ಕೆ ಬಂದು ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಪರಿಶೀಲನೆ ನಡೆಸಿ, ಸ್ವಚ್ಛತೆಗೆ ಆದ್ಯತೆ ವಹಿಸಬೇಕು. ವಿಕಲಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಂದ ನಿಗದಿತ ಶುಲ್ಕ ಪಡೆದು ಶೌಚಾಲಯ ಬಳಕೆಗೆ ಅವಕಾಶ ಕಲ್ಪಿಸಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು, ನಿಗದಿತ ದರದ ಬೋರ್ಡ್ ಹಾಕಬೇಕು ಎಂದು ಸೂಚಿಸಿದರು.

ನಿಲ್ದಾಣದ ಆವರಣದಲ್ಲಿರುವ ಶಿಶು ಆರೈಕೆ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿದ ಅವರು, ವಿಶ್ರಾಂತಿ ಕೊಠಡಿಯಲ್ಲಿ ಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿನಿತ್ಯ ವಿಶ್ರಾಂತಿ ಕೊಠಡಿಗೆ ಸಾರ್ವಜನಿಕರು ಆಗಮಿಸುವಂತೆ ಶುಚಿಯಾಗಿಟ್ಟುಕೊಳ್ಳಲು ಸಾರಿಗೆ ಸಂಸ್ಥೆಯ ಅಧಿಕಾರಿ ಡಿ.ಸಿ. ದೇವರಾಜ ಅವರಿಗೆ ಬಿ.ಬಿ. ಅಸೂಟಿ ನಿರ್ದೇಶನ ನೀಡಿದರು.

ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಪರಶುರಾಮ್ ಅಳಗವಾಡಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ರಫೀಕ್ ಮೂಗನೂರ್, ಬಿ.ಎಸ್. ರಡ್ಡೇರ, ಸಂಗು ನವಲಗುಂದ, ಮೇಘರಾಜ್, ಸಿದ್ದಪ್ಪ ಯಾಳಗಿ, ಹನುಮಂತಪ್ಪ ಸ್ವಾಲದ, ನಾಜಬೇಗಂ ಎಲಿಗಾರ, ಬಸವರಾಜ್ ತಳವಾರ, ಸುರೇಶ್, ಎಲ್ಲಪ್ಪ ಕಿರೇಸೂರು, ಗೀತಾ ಕೊಪ್ಪದ್, ಶರಣಪ್ಪ ಕುರಿಯೂರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಶಕ್ತಿ ಯೋಜನೆ ಮಹಿಳೆಯರ ಸಬಲತೆಗೆ ಶಕ್ತಿಯಾಗಿ ನಿಂತಿದೆ. ಅದರಂತೆ ಸುಸ್ಥಿರ ಬದುಕಿಗಾಗಿ ಗೃಹಲಕ್ಷ್ಮೀ ಯೋಜನೆ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ ಹಾಗೂ ಬಡವರ ಆಶಾಕಿರಣ ಗೃಹ ಜ್ಯೋತಿ, ನಿರುದ್ಯೋಗ ನಿವಾರಣೆಗೆ ಯುವನಿಧಿ ಸಹಕಾರಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಸಚಿವರಾದ ಎಚ್.ಕೆ. ಪಾಟೀಲ ಸೇರಿದಂತೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here