ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಬೇಡಜಂಗಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ತೆಗ್ಗಿನಮಠ ಸಂಸ್ಥಾನದ ವತಿಯಿಂದ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗವುದು ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ತೆಗ್ಗಿನಮಠದ ಸಭಾ ಭವನದಲ್ಲಿ ತಾಲೂಕು ಬೇಡಜಂಗಮ ಸಮಾಜದ ವತಿಯಿಂದ ಚಿರಸ್ಥಹಳ್ಳಿಯ ಲಿಂ. ಡಾ. ಕೆ.ಎಂ. ಮುರಿಗಯ್ಯನವರ ಸ್ಮರಣಾರ್ಥವಾಗಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣು-ಗಂಡು ಎಂಬ ಲಿಂಗ ಭೇದ ಮಾಡದೆ ಸಮಾನ ಶಿಕ್ಷಣ ಕೊಡಿಸಬೇಕು. ಬೇಡಜಂಗಮ ಸಮಾಜದ ಆಚಾರ-ವಿಚಾರಗಳನ್ನು ಮುಂದುವರಿಸಲು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕೆಂದು ಸಮುದಾಯದ ಮುಖಂಡರಿಗೆ ಸಲಹೆ ನೀಡಿದರು.
ತಾಲೂಕು ಬೇಡಜಂಗಮ ಸಮಾಜದ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಕಲ್ಮಠ್, ಎಸ್.ಎಂ. ವೀರಭದ್ರಯ್ಯ, ಕೆ.ಎಂ. ಗುರುಸಿದ್ದಯ್ಯ, ಟಿ.ಎಚ್.ಎಂ. ಮಲ್ಲಿಕಾರ್ಜುನಯ್ಯ, ಗ್ರಾ.ಪಂ ಸದಸ್ಯ ಕೆ.ಎಂ. ಚೆನ್ನಮಲ್ಲಿಕಾರ್ಜುನ, ಎಚ್.ಎಂ. ಜಗದೀಶ, ಎ.ಎಸ್.ಎಂ ಗುರುಪ್ರಸಾದ್, ಎಚ್‌ಎಂ. ಬಸವರಾಜಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.



