ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಆದಿಕವಿ ಪಂಪ ವೇದಿಕೆ: ಕನ್ನಡ ಸಾರಸ್ವತ ಲೋಕಕ್ಕೆ ಗದಗ ಜಿಲ್ಲೆಯ ಕೊಡುಗೆ ಅಗ್ರಗಣ್ಯ. ಕರ್ನಾಟಕ ಏಕೀಕರಣ, ನಾಮಕರಣದಲ್ಲಿ ಅಂದಾನೆಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾಯರ ಪಾತ್ರ ಮುಖ್ಯವಾಗಿದೆ ಎಂದು ಶಿರಹಟ್ಟಿ-ಬಾಲೆಹೊಸೂರು ಸಂಸ್ಥಾನ ಪೀಠದ ಜ. ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ, ನಾಡು, ಜಲ ಇತರೆಲ್ಲ ವಿಷಯದಲ್ಲಿ ನೆರೆ ರಾಜ್ಯಗಳಿಂದ ಸಮಸ್ಯೆಯಾಗುತ್ತಲೇ ಇದೆ. ಆದರೆ ರಾಜ್ಯದೊಳಗಡೆಯೇ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿರುವುದು ವಿಷಾದದ ಸಂಗತಿ. ಆಳುವ ಸರ್ಕಾರಗಳ ನೀತಿಯಿಂದ ಕನ್ನಡ ಕಲಿತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಮತ್ತು ಇಂಗ್ಲೀಷ್ ಕಲಿತವರು ಉದ್ಯೋಗಿಗಳಾಗುತ್ತಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಮೊದಲು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೇಡ, ಬದಲಾಗಿ ಅಭಿಮಾನ-ಸ್ವಾಭಿಮಾನ ಬೇಕು.
ಸಂಸತ್ತಿನಲ್ಲಿ ಮೊದಲು ಕನ್ನಡ ಭಾಷೆಯಲ್ಲಿ ಮಾತನಾಡಿದ ಕೀರ್ತಿ ಜೆ.ಎಚ್. ಪಟೇಲರು ಮತ್ತು ಇಂದಿರಾ ಗಾಂಧಿ ಎದುರಿಗೆ ಕುಳಿತು ಸಾವಲು ಹಾಕಿ ಗೆದ್ದ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾಗಿದ್ದ ದಿ.ಗೂಳಪ್ಪ ಉಪನಾಳ ನಮ್ಮ ಹೆಮ್ಮೆಯಾಗಿದ್ದಾರೆ. ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಅನ್ಯ ಭಾಷೆಯ ಜ್ಞಾನದ ಜೊತೆಗೆ ಮಾತೃಭಾಷೆ ಕನ್ನಡದ ಅಭಿಮಾನ ಬೆಳೆಸಬೇಕು. ರಾಜ್ಯಕ್ಕೆ ಕನ್ನಡ, ದೇಶಕ್ಕೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಇಂಗ್ಲೀಷ್ ಅವಶ್ಯ. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಲಿ ಆದರೆ ಬೇರೆ ಭಾಷೆಗಳ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳಬೇಡಿ. ಕನ್ನಡ ಶಾಲೆಗಳನ್ನು ಮುಚ್ಚುವದು ಬೇಡ. ಅವುಗಳನ್ನು ಬೆಳೆಸುವ ಕಾರ್ಯವಾಗಲಿ. ಕನ್ನಡ ಭಾಷೆ, ಜಲ, ಜಲದ ವಿಷಯ ಬಂದಾಗ ಕೇವಲ ಹೆಸರಿಗಾಗಿ ಬಡಿದಾಡದೆ ಕನ್ನಡದ ಉಸಿರಿಗಾಗಿ ಬಡಿದಾಡಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಎಲ್ಲಿ ಕನ್ನಡ ಉಳಿಯಬೇಕಾಗಿದೆಯೋ ಅಲ್ಲಿ ಕನ್ನಡ ಉಳಿಯುತ್ತಿಲ್ಲ. ಅಡುಗೆ ಮನೆಯಿಂದ ಆಡಳಿತದವರೆಗೂ ಕನ್ನಡ ಉಳಿಸಿದವರು ಹೆಣ್ಣುಮಕ್ಕಳು. ಕನ್ನಡ ಭಾಷೆ, ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ. ಗದಗ ಜಿಲ್ಲೆಯು ಕನ್ನಡ ನಾಡಿಗೆ ನೀಡಿದ ಕೊಡುಗೆಯಲ್ಲಿ ಕುಮಾರವ್ಯಾಸ, ಪಂಪ, ಪಂ. ಭೀಮಸೇನ ಜೋಶಿ, ಪಂ. ಪುಟ್ಟರಾಜ ಕವಿಗವಾಯಿಗಳು ಹೀಗೆ ಜಿಲ್ಲೆಯ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಆಶಯ ನುಡಿ ನುಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ನೀಲಗಿರಿ ತಳವಾರ, ಟಿ. ಈಶ್ವರ, ಪಕ್ಷಿ ಪ್ರೇಮಿ ಪ್ರಕಾಶ ಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗೀತಾ ಭೀರಣ್ಣವರ, ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ರಾಜು ಕುರಡಗಿ, ಪ್ರೊ. ಎಸ್.ಬಿ. ಕರಿಭರಮಗೌಡರ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ಕೆ.ಎಸ್. ಕೊಡ್ಲಿವಾಡ, ಎಸ್.ಎಫ್. ಶಿಗ್ಲಿ, ಗೀತಾ ಬೀರಣ್ಣವರ, ಅಶೋಕ ಸೊರಟೂರ, ಎಸ್.ಪಿ. ಬಳಿಗಾರ, ಶರಣು ಗೋಡಿ, ಮಂಜುನಾಥ ಮಾಗಡಿ, ಪುಲಿಕೇಶಿ ಉಪನಾಳ, ಡಿ.ಬಿ. ಬಳಿಗಾರ, ಫಕ್ಕೀರೇಶ ರಟ್ಟೀಹಳ್ಳಿ, ಫಕ್ಕೀರಗೌಡ್ರ ಪಾಟೀಲ, ಬಿಇಓ ಎಚ್. ನಾಣಕಿ ನಾಯ್ಕ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ಎಸ್.ಎಫ್. ಶಿಗ್ಲಿ, ಲೋಹಿತ ನೆಲವಿಗಿ ಮುಂತಾದವರಿದ್ದರು.
ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ರತ್ನಾ ಕುಂಬಾರ, ಸೋಮಶೇಖರ ಪಾಟೀಲ, ಆರ್.ಎಸ್. ಗಾಣಗೇರ ನಿರೂಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕನ್ನಡ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಇರುವ ಕೀಳುರಿಮೆ ಕಡಿಮೆಯಾಗಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಬೇಕು. ಕನ್ನಡದ ಮಹತ್ವವನ್ನು ಪ್ರತಿಯೊಬ್ಬರಿಗೆ ತಿಳಿಯುವಂತೆ ಮಾಡುವದು ಮುಖ್ಯವಾಗಿದ್ದು, ಪ್ರತಿ ವರ್ಷ ಸಮ್ಮೇಳನ ನಡೆಯುವಂತಾಗಬೇಕು. ಇದಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ಪ್ರತಿವರ್ಷ ನಡೆದು ಮಹತ್ವ ತಿಳಿಸುವ ಕಾರ್ಯವಾಗಲಿ. ಲಕ್ಷ್ಮೇಶ್ವರದಲ್ಲಿ ಕಸಾಪ ಭವನ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.



