ಬೆಂಗಳೂರು;- MP ಎಲೆಕ್ಷನ್ ಒಳಗಾಗಿ ಮೀಸಲಾತಿ ನೀಡಿ ಇಲ್ಲವೇ ಹೋರಾಟ ಎದುರಿಸಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತ ಸಮುದಾಯದ ನ್ಯಾಯಯುತ ಮೀಸಲಾತಿಗಾಗಿ 3 ವರ್ಷ ಹೋರಾಡಿದ್ದೇವೆ. ಚಳುವಳಿ ಒಂದು ಹಂತಕ್ಕೆ ತಲುಪಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕುಳಿತಾಗ ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಿಂದ ಹಿಂದಿನ ಸರ್ಕಾರ ಹೊಸದಾಗಿ 2ಡಿ ಎಂದು ಹೊಸ ಮೀಸಲಾತಿ ಘೋಷಿಸಿತು. ಚುನಾವಣೆ ನೀತಿ ಸಂಹಿತೆ ಕಾರಣ ವಿಳಂಬವಾಗಿತ್ತು. ನಂತರ ಸರ್ಕಾರ ಬದಲಾಯಿತು. ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಈ ಕುರಿತು ಒಂದು ಸಭೆ ಕರೆಯುತ್ತೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ ಎಂದಿದ್ದರು. ಆದರೆ, ಸಭೆಯಾಗಿ ಮೂರ್ನಾಲ್ಕು ತಿಂಗಳಾದರೂ ಏನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿಗಾಗಿ ಈ ಸರ್ಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ಮೂಲಕ ಹೋರಾಟ ಆರಂಭಿಸಿದ್ದೇವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಧಾರವಾಡದಲ್ಲಿ ಮಾಡಿದ್ದೇವೆ. ಎಲ್ಲ 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ. ಹೋರಾಟ ಮುಗಿಯುವುದರೊಳಗೆ ಸರ್ಕಾರ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಸಮಾಜದ ಬಾಂಧವರೆಲ್ಲ ಸೇರಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಮುದಾಯ ಶಕ್ತಿ ಪ್ರದರ್ಶನ ಮಾಡುತ್ತೇವೆ. ಹೋರಾಟ ತೀವ್ರಗೊಳ್ಳುತ್ತದೆ. ಲೋಕಸಭೆ ಚುನಾವಣೆಯೊಳಗೆ ಸಮಾಜಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.