ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ತನ್ನ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನಿನ ಸೈನಿಕರಿಗೆ “ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಇಲ್ಲವೇ ಸಾವನ್ನು ಎದುರಿಸಿ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಪೂರ್ವಭಾವಿ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಪಡೆಗಳು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಆರಂಭಿಸಿವೆ ಎಂದು ಟ್ರಂಪ್ ಘೋಷಿಸಿದ್ದಾರೆ.
“ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಇರಾನ್‌ನಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಇರಾನ್ ಆಡಳಿತದಿಂದ ಎದುರಾಗಬಹುದಾದ ಬೆದರಿಕೆಗಳಿಂದ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶ” ಎಂದು ಅವರು ಹೇಳಿದ್ದಾರೆ.
ಅಮೆರಿಕದ ಹಿತಾಸಕ್ತಿಗಳ ವಿರುದ್ಧ ದಶಕಗಳಿಂದ ಟೆಹ್ರಾನ್ ಸಂಚು ರೂಪಿಸುತ್ತಿದೆ. ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು, ಸಶಸ್ತ್ರ ಪಡೆಗಳು ಮತ್ತು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿದ ಅವರು, “ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ. ನಮ್ಮ ಸೂಚನೆ ಪಾಲಿಸಿದರೆ ನ್ಯಾಯಯುತವಾಗಿ ವರ್ತಿಸಲಾಗುತ್ತದೆ. ಇಲ್ಲವೇ ಸಾವು ನಿಶ್ಚಿತ” ಎಂದು ಹೇಳಿದ್ದಾರೆ.
ಈ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇಸ್ರೇಲ್–ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.



