ವಿಜಯಸಾಕ್ಷಿ ಸುದ್ದಿ, ಗದಗ : ಹಲವು ದಶಕಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯರ್ತನಾಗಿ, ಆರ್‌ಎಸ್‌ಎಸ್ ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸಲು ಶ್ರಮಿಸಿದ ಸರಳ, ಸಜ್ಜನ ರಾಜಕಾರಣಿ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಈ ಬಾರಿ ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಟಿಕೆಟ್ ನೀಡಬೇಕು ಎಂದು ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ದಶರಥರಾಜ ಕೊಳ್ಳಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೇಕಾರಿಕೆ ಅವಲಂಬಿಸಿರುವ ಹಲವು ಸಮಾಜಗಳನ್ನು ಜೋಡಿಸಿ ನೇಕಾರ ಸಮುದಾಯಗಳ ಒಕ್ಕೂಟ ಸ್ಥಾಪಿಸಿ ಒಂದೇ ವೇದಿಕೆಯಲ್ಲಿ ನೇಕಾರರನ್ನು ಜೋಡಿಸಿದ ಕೀರ್ತಿ ಎಂ.ಡಿ. ಲಕ್ಷ್ಮೀನಾರಾಯಣರಿಗೆ ಸಲ್ಲುತ್ತದೆ. ದೇವಾಂಗ ಹಾಗೂ ನೇಕಾರಿಕೆ ಕುಲ ಕಸುಬುಗಳನ್ನು ಮಾಡಿಕೊಂಡ ಸಮುದಾಯಗಳ ಒಗ್ಗಟ್ಟಿಗಾಗಿ ಕರ್ನಾಟಕದಾದ್ಯಂತ ಸಂಚರಿಸಿ ನೇಕಾರರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನೇಕ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ವಿಧಾನ ಪರಿಷತ್‌ಗೆ ಆಯ್ಕೆ ಆಗುವುದರಿಂದ ನೇಕಾರ ಸಮಾಜ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸೀಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಕೆಹೆಚ್‌ಡಿಸಿ ನಿಗಮದ ಅಧ್ಯಕ್ಷರಾಗಿದ್ದಾಗ ಸಾಂಪ್ರದಾಯಿಕ ನೇಕಾರರ ಉದ್ಯೋಗ ಸಮಸ್ಯೆ ಆಲಿಸಿ, ಜೀವನ ಮಟ್ಟ ಸುಧಾರಿಸಲು ಹತ್ತು-ಹಲವು ಯೋಜನೆ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿ ಅವರು ವಿಧಾನ ಪರಿಷತ್‌ಗೆ ಆಯ್ಕೆ ಆದಾಗ ನೇಕಾರರ ಪರವಾಗಿ ಧ್ವನಿ ಎತ್ತಿದ್ದು ನಮ್ಮ ಕಣ್ಮುಂದೆ ಇದೆ. ಈ ಎಲ್ಲ ಮಾನದಂಡಗಳನ್ನು ಮುಂದಿಟ್ಟುಕೊಂಡು ಎಂ.ಡಿ. ಲಕ್ಷ್ಮೀನಾರಾಯಣರಿಗೆ ಮತ್ತೆ ವಿಧಾನಪರಿಷತ್ ಟಿಕೆಟ್ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಸಿ ಪಾಟೀಲ, ಮಾಜಿ ಶಾಸಕ ಕಳಕಪ್ಪ ಬಂಡಿಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪ್ರೇಮನಾಥ ಬಣ್ಣದ, ಶ್ರೀನಿವಾಸ ಹುಬ್ಬಳ್ಳಿ, ಅನಿಲ ಗಡ್ಡಿ, ಮಲ್ಲಿಕಾರ್ಜುನ ಬೆಲ್ಲದ, ಕೇಶವರಾಮ್ ಕೊಳ್ಳಿ, ರಾಜೇಂದ್ರ ಭರದ್ವಾಡ, ಪ್ರಕಾಶ ಹತ್ತಿಕಾಳ, ಪ್ರಭು ನೀಲಗುಂದ, ಸುಭಾಸ್ ಗಂಜಿ, ನಾರಾಯಣಪ್ಪ ಕಂಗೂರಿ, ಕಿರಣಕುಮಾರ ಬಣ್ಣದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಏಳಿಗೆಗೆ ಎಂ.ಡಿ ಲಕ್ಷ್ಮೀನಾರಾಯಣ ಸಾಕಷ್ಟು ಸೇವೆ ಮಾಡಿ ಜನಮನ ಗೆದ್ದಿದ್ದಾರೆ. ಈ ಹಿಂದೆ ದೇವಾಂಗ ಸಮಾಜಕ್ಕೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಅಂದಾಜು 2 ಕೋಟಿ ವೆಚ್ಚದಲ್ಲಿ ದೇವಾಂಗ ಸಮುದಾಯ ಭವನ ನೀರ್ಮಿಸಿದ್ದಾರೆ. ಜೊತೆಗೆ ದೇವಾಂಗ ಸಮಾಜದ ಸಮಾವೇಶ ಮಾಡಿದ್ದಾರೆ. ಹೀಗಾಗಿ, ಬಿಜೆಪಿ ಅವರಿಗೆ ಮತ್ತೊಮ್ಮೆ ವಿ.ಪ ಟಿಕೆಟ್ ನೀಡಬೇಕು.
-ಅಶೋಕ ಬಣ್ಣದ.
ಸಮಾಜದ ಮುಖಂಡರು.ಸರಳ ಸಜ್ಜನಿಕೆಯ ನಾಯಕ, ನೇಕಾರರ ಬದುಕನ್ನು ಹಸನಾಗಿಸಿದ ಧುರೀಣ ಎಂ.ಡಿ ಲಕ್ಷ್ಮೀನಾರಾಯಣರು ನೇಕಾರ ಸಮುದಾಯದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕೈಮಗ್ಗ ನೇಕಾರಿಕೆ ನಶಿಸಿ ಹೋಗುವ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು, ನೇಕಾರರ ಬದುಕು ಅರಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ, ಪಕ್ಷಾತೀತವಾಗಿ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಅವರು ವಿ.ಪ ಸದಸ್ಯರಾಗಿ ಆಯ್ಕೆ ಆಗುವುದರಿಂದ ನೇಕಾರರ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗುತ್ತದೆ.
– ರಾಘವೇಂದ್ರ ಯಳವತ್ತಿ.
ನಗರಸಭೆ ಸದಸ್ಯರು.