ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರಿ ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಹಾಳಾದ ಹೆಸರು ಬೆಳೆಯ ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ನರೇಗಲ್ಲ ಕಂದಾಯ ಗ್ರಾಮದ ವ್ಯಾಪ್ತಿಯ ರೈತರಿಗೆ ಭಾರೀ ಅನ್ಯಾಯವಾಗಿರುವುದನ್ನು ಖಂಡಿಸಿ ರೈತಸೇನಾ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ರೈತಸೇನಾ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಬೆಳೆಯಲಾಗಿದ್ದ ಹೆಸರು ಬೆಳೆಯು ಭಾರೀ ಮಳೆಯ ಕಾರಣದಿಂದ ಸಂಪೂರ್ಣ ಹಾಳಾಗಿತ್ತು. ಅದಕ್ಕೆ ಬೆಳೆ ಪರಿಹಾರ ವಿತರಿಸುವಂತೆ ಕಳೆದ ತಿಂಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಬೆಳೆ ಪರಿಹಾರ ವಿತರಣೆ ಮಾಡುವುದಾಗಿ ಹೇಳಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದರು. ಆದರೆ, ಶೇ. 65ರಷ್ಟು ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆಯಾಗಿಲ್ಲ. ವಿಮಾ ಕಂಪನಿಯು ಕೆಲವಷ್ಟು ರೈತರಿಗೆ 100–200 ರೂಪಾಯಿ ಪರಿಹಾರ ಜಮಾ ಮಾಡಿದ್ದು, ಯಾವ ಮಾನದಂಡದ ಮೇಲೆ ಪರಿಹಾರ ವಿತರಿಸಲಾಗಿದೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ವಿಮಾ ಕಂಪನಿಯವರು ಚಿಲ್ಲರೆ ಕಾಸು ನೀಡುವ ಮೂಲಕ ರೈತರನ್ನು ಅವಮಾನ ಮಾಡಿದ್ದಾರೆ. ಆದ್ದರಿಂದ, ವಿಮಾ ಕಂಪನಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಮಾತನಾಡಿ, ಬೆಳೆ ಹಾನಿ ವಿತರಣೆಗಾಗಿ ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಅದರ ಪ್ರಕಾರ ಪರಿಹಾರ ವಿತರಣೆ ಮಾಡಲಾಗಿದೆ. ಎಫ್‌ಐಡಿ ಮಾಡಿಸದೇ ಇರುವ ಹಾಗೂ ಹೆಸರು ತಪ್ಪಾಗಿ ನಮೂದಾಗಿ ಮಿಸ್‌ಮ್ಯಾಚ್ ಆದ, ಹಾಗೂ ಜಿಪಿಎಸ್ ಆಗದ ರೈತರಿಗೆ ವಿಮೆ ಹಣ ವಿತರಣೆಯಲ್ಲಿ ವ್ಯತ್ಯಯವಾಗಿದ್ದು, ಈಗಾಗಲೇ ರೈತರಿಗೆ ಎಫ್‌ಐಡಿ ಮಾಡಿಸುವಂತೆ ತಿಳಿಸಲಾಗಿದೆ. ಬೆಳೆ ಪರಿಹಾರ ಜಮೆಯಾಗದ ರೈತರು ಎಫ್‌ಐಡಿ ಮಾಡಿಸಿಕೊಂಡಲ್ಲಿ ಬೆಳೆ ಹಾನಿ ಜಮೆಯಾಗಲಿದೆ. ನೀವು ಇಟ್ಟಿರುವ ಇತರೆ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಸಚಿವರ, ಹಾಗೂ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗನೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರು ಹೊನವಾಡ, ಶರಣಪ್ಪ ಧರ್ಮಾಯತ, ಬಾಳಪ್ಪ ಸೊಮಗೊಂಡ, ಶ್ರೀಕಾಂತ ಹೊಸಮನಿ, ಶರಣಪ್ಪ ಗಂಗರಗೊಡ, ರುದ್ರೇಶ ಕೊಟಗಿ, ಮಲ್ಲನಗೌಡ ಪಾಟೀಲ, ಮಂಜುನಾಥ ಪಾಯಪ್ಪಗೌಡ್ರ, ವಿರುಪಾಕ್ಷಪ್ಪ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಪ್ರಕಾಶ ಪಿಡಗೊಂಡ, ಶೇಖಪ್ಪ ಲಕ್ಕನಗೌಡ್ರ, ಮಂಜುನಾಥ ಕಮಲಾಪೂರ, ಅರುಣ ಜುಟ್ಲದ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಕಳಕಣ್ಣೋವರ, ಬಸವರಾಜ ಮಡಿವಾಳರ ಸೇರಿದಂತೆ ರೈತರಿದ್ದರು. ರೋಣ ಸಿಪಿಐ ಎನ್. ವಿಜಯಕುಮಾರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ನರೇಗಲ್ಲ ಹೋಬಳಿಯಾದ್ಯಂತ ಬೆಳೆಯಲಾಗಿದ್ದ ಗೋವಿನಜೋಳಕ್ಕೆ ವಿಮೆ ಮಾಡಿಸಿದ್ದ ರೈತರಿಗೆ ಬಿಡಿಗಾಸಿನ ಪರಿಹಾರ ನೀಡುವ ಮೂಲಕ ರೈತರನ್ನು ಅವಮಾನಿಸಿದ್ದು, ಸಾರ್ವಜನಿಕವಾಗಿ ಭಿಕ್ಷೆಯನ್ನು ಸಂಗ್ರಹಿಸಿ ವಿಮಾ ಕಂಪನಿಗೆ ನೀಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.



