ಬೆಂಗಳೂರು: ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಿರುವುದು ಆರ್ಥಿಕ ವಿಂಗಡನೆಗೆ ನಾಂದಿ ಹಾಡಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗಿನ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ.
ಸರ್ಕಾರದ ಹಿಂದೂ ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ್ದಾರೆ. ಕಡುಬು ತಿನ್ನುವುದು ಕಹಿ ನೀರು ಕುಡಿಯುವುದು. ರಾಜ್ಯವನ್ನು 1,16,000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರುವ ಸಿದ್ದರಾಮಯ್ಯನವರ ಹದಿನಾರನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ ಎಂದು ಕಿಡಿಕಾರಿದ್ದಾರೆ.
ಬಜೆಟ್ ಎನ್ನುವುದು ನನ್ನ ದೃಷ್ಟಿಯಲ್ಲಿ ಕೇವಲ ಬಿಳಿಹಾಳೆಯಲ್ಲ ಎಂದು ವ್ಯಾಖ್ಯಾನಿಸಿರುವ ಸಿದ್ದರಾಮಯ್ಯನವರು ಶಾಶ್ವತ ಯೋಜನೆಗಳತ್ತ ಗಮನ ಹರಿಸಿಲ್ಲ. ಕರಾವಳಿ ಭಾಗದ ಜಿಲ್ಲೆಗಳಿಗಂತೂ ಯಾವುದೇ ಕೊಡುಗೆ ಇಲ್ಲ. ಮಂಗಳೂರಿನಿಂದ ಕಾರವಾರದವರೆಗಿನ ಕೊಂಕಣ ರೈಲ್ವೆ ಯೋಜನೆಗೆ ಸರ್ಕಾರ ನೆರವಿನ ಹಸ್ತ ಚಾಚಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.