ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನು ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಬದಲಿಗೆ ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಏನೆಂದು ಗೊತ್ತಾಗುತ್ತದೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಿಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿದ್ದು ಅಲ್ಲ.
ಜೆ.ಹೆಚ್. ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾ ವಿಷಯ ಇಟ್ಟಿಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದ ಕೇಂದ್ರ ಸಚಿವರು; ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.



