ಪಣಜಿ: ಗೋವಾದ ರೋಮಿಯೋ ಲೇನ್ ನೈಟ್ಕ್ಲಬ್ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದ ಬಳಿಕ ಥೈಲ್ಯಾಂಡ್ಗೆ ಪರಾರಿಯಾದ ಕ್ಲಬ್ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರನ್ನು ಬಂಧಿಸಲಾಗಿದೆ.
ಡಿಸೆಂಬರ್ 7ರಂದು ಕ್ಲಬ್ಗೆ ಬೆಂಕಿ ತಗುಲಿ 25 ಮಂದಿ ಸಾವನ್ನಪ್ಪಿದ ಘಟನೆ ದೇಶವನ್ನೇ ಕಂಗೊಳಿಸಿತ್ತು. ಘಟನೆ ಬಳಿಕ ಪರಾರಿಯಾದ ಲೂತ್ರಾ ಸಹೋದರರ ವಿರುದ್ಧ ಗೋವಾ ಪೊಲೀಸರು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಇದೀಗ ಅವರನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬೆಂಕಿ ಅವಘಡದ ನಂತರ, ಲೂತ್ರಾ ಸಹೋದರರು ನಡೆಸುತ್ತಿದ್ದ ಗೋವಾ ವಾಗೇಟರ್ನ ರೋಮಿಯೋ ಲೇನ್ ರೆಸ್ಟೋರೆಂಟ್ನ್ನು ಕೂಡಾ ಕೆಡವಲಾಗಿದೆ.
ನೈಟ್ಕ್ಲಬ್ನ ಇನ್ನೊಬ್ಬ ಮಾಲೀಕರಾದ ಅಜಯ್ ಗುಪ್ತಾ ಅವರನ್ನು ಗೋವಾ ಪೊಲೀಸರು ಬುಧವಾರ ಬಂಧಿಸಿದ್ದರು. ಇವರಿಗೆ ಈಗಾಗಲೇ ಲುಕ್ಔಟ್ ನೋಟಿಸ್ ಜಾರಿಯಾಗಿತ್ತು. ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ಬಂಧಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಿರುವ ಸಂದರ್ಭದಲ್ಲೇ ಈ ದುರಂತ ನಡೆದಿರುವುದರಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ರಿಪೋರ್ಟ್ ಹೇಳಿದೆ.



