ವಿಜಯಸಾಕ್ಷಿ ಸುದ್ದಿ, ರಟ್ಟೀಹಳ್ಳಿ: ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮ ಗುರಿಯಾಗಬೇಕು. ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಉತ್ತಮ ಗುರಿ ಮತ್ತು ಆದರ್ಶ ವ್ಯಕ್ತಿತ್ವ ವಿಕಾಸಕ್ಕೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠ್ಯಬ್ಧಿ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಸಮಾರಂಭವನ್ನು ಉದ್ಘಾಟಿಸಿ ಶಿವಲಿಂಗ ಶ್ರೀಗಳ ಕ್ರಿಯಾಶೀಲತೆಯ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಬ್ಬಿಣಕಂಥಿಮಠ ಈ ಭಾಗದ ಭಕ್ತರಿಗೆ ಸಂಸ್ಕಾರ-ಸದ್ವಿಚಾರಗಳನ್ನು ಬೋಧಿಸುತ್ತ ಬಂದಿದೆ. ಶಿವಲಿಂಗ ಶ್ರೀಗಳು ಶ್ರೀ ಮಠದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ‘ಶ್ರೀ ಕಬ್ಬಿಣಕಂಥಿಮಠ ಪರಂಪರೆ’ ಪರಿಚಯ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಸಮಾರಂಭದ ನೇತೃತ್ವ ವಹಿಸಿದ್ದ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಸಮಾರಂಭದಲ್ಲಿ ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡು ಶಿವಲಿಂಗ ಶ್ರೀಗಳವರಿಗೆ ಗೌರವಿಸಿ ಸತ್ಕರಿಸಿದರು.
ಮುಖ್ಯ ಅತಿಥಿಗಳಾಗಿ ಟಿಎಪಿಸಿಎಮ್‌ಎಸ್ ಅಧ್ಯಕ್ಷ ಪ್ರಶಾಂತ ದ್ಯಾವಕ್ಕಳವರ, ನಿವೃತ್ತ ಐಎಫ್‌ಎಸ್ ಅಧಿಕಾರಿ ಮಂಜುನಾಥ ತಂಬಾಕದ, ಜಿ.ಪಂ ಮಾಜಿ ಸದಸ್ಯರಾದ ಪ್ರಕಾಶ ಬನ್ನಿಕೋಡ, ನಾರಾಯಣಪ್ಪ ಗೌರಕ್ಕನವರ, ಎನ್.ಎಮ್. ಈಟೇರ, ಪಿ.ಡಿ. ಬಸವನಗೌಡ್ರ ಸೇರಿದಂತೆ ಎನ್.ಜಿ. ನಾಗನಗೌಡ್ರ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಹೇಮಣ್ಣ ಮುದಿರಡ್ಡೇರ್, ಎ.ಕೆ. ಪಾಟೀಲ, ಡಾ. ನಿಂಗಪ್ಪ ಚಳಗೇರಿ, ಶಂಭಣ್ಣ ಗೂಳಪ್ಪನವರ, ಮಾಲತೇಶಗೌಡ ಗಂಗೋಳ, ಹನುಮಂತಗೌಡ ಭರಮಣ್ಣನವರ, ಕಂಠಾಧರ ಅಂಗಡಿ, ಸಂದೀಪ ಎಸ್.ಪಾಟೀಲ, ಆರ್.ಎನ್. ಗಂಗೋಳ, ಮಹೇಶಯ್ಯ ಮಠದ, ಪ್ರಭುಲಿಂಗಸ್ವಾಮಿ ಕಬ್ಬಿಣಕಂಥಿಮಠ, ಮಲ್ಲೇಶಪ್ಪ ಹುಲ್ಮನಿ, ಪರಮೇಶಪ್ಪ ಹಲಗೇರಿ, ರುದ್ರಮುನಿಸ್ವಾಮಿ ಆರಾಧ್ಯಮಠ, ವಿರೂಪಾಕ್ಷಪ್ಪ ಹಂಪಾಳಿ ವೀರನಗೌಡ ಪ್ಯಾಟಿಗೌಡ್ರ, ಲಿಂಗಯ್ಯ ಹಿರೇಮಠ, ರಾಜು ಹರವಿಶೆಟ್ರ ಮೊದಲಾದವರು ಪಾಲ್ಗೊಂಡು ಶ್ರೀಗಳವರ ಯಶೋಗಾಥೆಯನ್ನು ಕೊಂಡಾಡಿದರು.
ಡಾ. ಎಸ್.ಪಿ. ಗೌಡರ್ ಪ್ರಾಸ್ತಾವಿಕ ನುಡಿದರು. ವಸಂತ ದ್ಯಾವಕ್ಕಳವರ ಸ್ವಾಗತಿಸಿದರು. ಸಿ.ಎಸ್. ಚಕ್ರಸಾಲಿ, ಸಿ.ಬಿ. ಅಂಗಡಿ ನಿರೂಪಿಸಿದರು.
ಮನುಷ್ಯ ಜೀವನದಲ್ಲಿ ಧರ್ಮ, ಯಶಸ್ಸು, ನೀತಿ, ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಒಳ್ಳೆಯ ಗುಣ, ಒಳ್ಳೆಯ ಸಂಬಂಧ ಜೀವನದ ಅಮೂಲ್ಯ ಸಂಪತ್ತು. ಪ್ರಾಣ, ಯೌವನ, ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಜೀವನದ ಉನ್ನತಿಗೆ, ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ವೀರಶೈವ ಧರ್ಮದಲ್ಲಿ ಕ್ರಿಯಾಶೀಲ ಬದುಕಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಲ್ಲಿ ಅಡಗಿರುವ ಅಜ್ಞಾನ ದೂರ ಮಾಡಿ ಸಂಸ್ಕಾರ ಸಂಸ್ಕೃತಿ ಬಿತ್ತಿ ಬೆಳೆದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ರಂಭಾಪುರಿ ಶ್ರೀಗಳು ಹರುಷ ವ್ಯಕ್ತಪಡಿಸಿದರು.