ವಿಜಯಸಾಕ್ಷಿ ಸುದ್ದಿ, ಗದಗ: 2022ರಲ್ಲಿ ಜನರ ಸೇವೆಗಾಗಿ 22 ಕೆಲಸಗಳನ್ನು ಸೇವಾ ತಂಡ ಮಾಡಬೇಕು ಎಂಬ ಸಂಕಲ್ಪ ಕೈಗೊಂಡು, ವೈದ್ಯಕೀಯ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಕೈ-ಕಾಲು ಜೋಡಣೆ ಸೇರಿದಂತೆ ಹಲವು ಯೋಜನೆ ರೂಪಿಸಲಾಯಿತು. ರಾಜಕೀಯೇತರವಾಗಿ 2022-2023ರ ಅವಧಿಯಲ್ಲಿ 80 ಸಾವಿರ ಜನರನ್ನು ಸೇವಾ ತಂಡದ ಕಾರ್ಯಕರ್ತರು ಸಂಪರ್ಕಿಸಿದ್ದಾರೆ. ರಾಜಕೀಯ ಕಾರ್ಯಕರ್ತರು ಅರ್ಧ ರಾಜಕಾರಣ, ಅರ್ಧ ಸೇವೆ ಮಾಡಿದರೆ ನೆಮ್ಮದಿಯ ನಾಡು, ಶಾಂತಿಯ ನೆಲೆಬೀಡು ಆಗುತ್ತದೆ. ಇದೇ ಸೇವಾ ತಂಡದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದ ಸಭಾಭವನದಲ್ಲಿ ಕೆ.ಎಚ್. ಪಾಟೀಲ ಸೇವಾ ತಂಡದಿಂದ ಅಂಗಾಗಗಳ ದಾನ ಮಾಡಿ ಪ್ರತಿಜ್ಞೆಗೈದು ನೋಂದಾಯಿಸಿದ 1440 ದಾನಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಸಚಿವರು ಮಾತನಾಡಿದರು.
ಸೇವಾ ತಂಡದಿಂದ ಕೇವಲ 20 ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ಅಂಗಾಗ ದಾನಿಗಳನ್ನು ಹುಡುಕಿ ದಾನ ಮಾಡಿಸಲಾಗಿದೆ. ಸೇವಾ ತಂಡದ ಕಾರ್ಯಕರ್ತರು ಸೇವೆ ಎನ್ನುವ ಪದಕ್ಕೆ ಬದ್ಧರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಕಾರ್ಯಕರ್ತರು ಕೇವಲ ರಾಜಕೀಯ ಮಾಡುವದಷ್ಟೇ ಎನ್ನುವ ಮನಸ್ಥಿತಿ ದೇಶದಲ್ಲಿದೆ. ಆದರೆ, ಗದಗ ಮತಕ್ಷೇತ್ರದ ರಾಜಕೀಯ ಕಾರ್ಯಕರ್ತರು ಚುನಾವಣಾ ಸಮಯ ಹೊರತುಪಡಿಸಿ ಸೇವಾ ಮನೋಭಾವದಲ್ಲಿ ತೊಡಗಿ ದೇಶಕ್ಕೆ ಮಾದರಿಯಾಗಿದ್ದಾರೆ. ಕೊರೋನಾ ಸಮಯದಲ್ಲೂ ನಿರಂತರ ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕೊರೋನಾ ಸಮಯದಲ್ಲಿ ರೋಗಿಗಳಿಗೆ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.
ಜಿಮ್ ನಲ್ಲಿ ಆಕ್ಸಿಜನ್ ತೊಂದರೆ ಆದಾಗ ಸ್ಪಂದಿಸುವ ಕೆಲಸ ಮಾಡಲಾಗಿದೆ. ಕೊಲ್ಹಾಪೂರದಿಂದ 25 ವೆಂಟಿಲೇಟರ್ ತರಿಸಿ ಜನರ ಜೀವ ಉಳಿಸುವ ಕೆಲಸ ಮಾಡಲಾಗಿದೆ. ಪಕ್ಷ, ಜಾತಿ, ಧರ್ಮ ಮೀರಿ ಸೇವಾ ತಂಡ ಕೆಲಸ ಮಾಡುತ್ತಿದೆ. ಸೇವಾ ತಂಡಕ್ಕೆ ದೇವರ ದಯೆ, ಹಿರಿಯ ಆಶೀರ್ವಾದ ಇದೆ. ಪಂಚ ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಮೇತ ಕಿತ್ತು ಹಾಕಿದ್ದೇವೆ. ಶಿರಹಟ್ಟಿ ತಾಲೂಕಿನಲ್ಲಿ ರೋಗಿಗಳ ಮನೆ-ಮನೆಗೆ ತೆರಳಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ಡಿ.ಆರ್. ಪಾಟೀಲ, ಧಾರವಾಡ ಹಿರಿಯ ಕಾಂಗ್ರೆಸ್ ಮುಖಂಡ ಹಿಂಡಸಗೇರಿ, ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಕೊಟ್ರೇಶಪ್ಪ ಬಣೆಗಣ್ಣಿ, ಡಾ. ಪ್ಯಾರಾಲಿ ನೂರಾನಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಅಸೂಟಿ, ಅಶೋಕ ಮಂದಾಲಿ, ಸಿದ್ದಲಿಂಗೇಶ ಪಾಟೀಲ, ಹಿರಿಯ ಮುಖಂಡರಾದ ವಾಸಣ್ಣ ಕುರಡಗಿ, ಬಸವರಾಜ ಕಡೆಮನಿ, ಪ್ರಭು ಬುರಬುರೆ, ಜಿ.ಎಸ್. ಗಡ್ಡದೇವರಮಠ, ವಿದ್ಯಾಧರ ದೊಡ್ಡಮನಿ, ಅನಿಲಕುಮಾರ ಸಿದ್ದಮ್ಮನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆಗಸ್ಟ್ 14, 2022ರಲ್ಲಿ ಸೇವಾ ತಂಡದ ಉದಯವಾಯಿತು. ಡಾ. ಎಚ್.ಕೆ. ಪಾಟೀಲರು 21 ಸೇವೆಗಳನ್ನು ಗುರುತಿಸಿದರು. ಜುಲೈ 5, 2025ರಲ್ಲಿ ಸೇವಾ ತಂಡವನ್ನು ನೋಂದಾಯಾಸಲಾಯಿತು. ಆಗಸ್ಟ್ 15ರಂದು ಎಚ್.ಕೆ. ಪಾಟೀಲರ ಜನ್ಮದಿನದ ಅಂಗವಾಗಿ ಅಂಗಾಂಗ ದಾನ ಮಾಡಲು ಸೇವಾ ತಂಡದಿಂದ ತಿರ್ಮಾನ ಕೈಗೊಂಡು ಕೇವಲ 19 ದಿನಗಳಲ್ಲಿ ಗದಗ-ಬೆಟಗೇರಿ ವ್ಯಾಪ್ತಿಯಲ್ಲಿ 1440 ಅಂಗಾಗ ದಾನದ ಸಂಕಲ್ಪ ಮಾಡಲಾಗಿದ್ದು, ಇದುವರೆಗೂ 2 ಸಾವಿರಕ್ಕೂ ಅಧಿಕ ಜನರು ಅಂಗಾಂಗ ದಾನದ ಸಂಕಲ್ಪ ಮಾಡಿದ್ದಾರೆ.
– ಪ್ರಭು ಬುರಬುರೆ.
ಸೇವಾ ತಂಡದ ಅಧ್ಯಕ್ಷರು.