`ಹಾಮಾನಾ’ ಪುರಸ್ಕಾರಕ್ಕೆ ಭಾಜನವಾದ ಪತ್ರಕರ್ತ ಡಾ.ಮಂಜುನಾಥ್ ಬರೆದ ‘ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ಧಿ’ಪುಸ್ತಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಕರ್ತ, ಬರಹಗಾರ ಹಾಗೂ ಪ್ರಸ್ತುತ ಕಾರವಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ಬರೆದ ‘ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ಧಿ’ ಪುಸ್ತಕವು `ಹಾಮಾನಾ ಕನ್ನಡ ಜಾಗೃತಿ ಪುಸ್ತಕ’ ಪುರಸ್ಕಾರಕ್ಕೆ ಭಾಜನವಾಗಿದೆ.

Advertisement

ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕೊಡುಮಾಡುವ 2024ನೇ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ ಇದಾಗಿದೆ. ಐದು ಸಾವಿರ ರೂ. ನಗದು ಬಹುಮಾನ, ಫಲಕದೊಂದಿಗೆ ಪ್ರಶಸ್ತಿಪತ್ರವನ್ನು ನೀಡಲಾಗುವುದು ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಮೋಹನ್ ಕುಂಟಾರ್ ಅವರ ‘ಅನುವಾದ ಒಲವು-ನಿಲುವು’ ಗ್ರಂಥಕ್ಕೆ ಸಮಾಧಾನಕರ ಬಹುಮಾನ ದೊರೆತಿದೆ. ಡಾ. ಎಸ್. ಗುರುಮೂರ್ತಿ ಅವರ ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’ ಕ್ಷೇತ್ರ ಪರಿಚಯದ ಸಚಿತ್ರ ಸಂಪುಟಕ್ಕೆ ಮೆಚ್ಚುಗೆ ಬಹುಮಾನ ನೀಡಲಾಗುತ್ತಿದೆ.

ಡಿ. ೩ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಕನ್ನಡ ಮಾಧ್ಯಮದ ಮಕ್ಕಳಿಗೆ ಪುರಸ್ಕಾರ ನೀಡುವ ಸಮಾರಂಭ ಜರುಗಲಿದೆ. ಅದೇ ಸಮಾರಂಭದಲ್ಲಿ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ ನೀಡಲಾಗುವದು. ಈ ಸಂದರ್ಭದಲ್ಲಿ ಸಾಹಿತಿ ಡಾ. ಎಲ್. ಹನುಮಂತಯ್ಯ, ಚಲನಚಿತ್ರ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಅವರುಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here