ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್, ತರುಣ್ ರಾಜ್ ಮತ್ತು ಸಾಹಿಲ್ ಜೈನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಮೂವರು ಆರೋಪಿಗಳು ತಮ್ಮ ಬಂಧನ ಅಕ್ರಮವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೂಲಕ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯವು ಅವರ ವಾದವನ್ನು ತಳ್ಳಿ ಹಾಕಿದೆ.
ನ್ಯಾಯಮೂರ್ತಿಗಳು ಅನು ಶಿವರಾಮನ್ ಮತ್ತು ವಿಜಯ್ ಕುಮಾರ್ ಪಾಟೀಲ್ ನೇತೃತ್ವದ ಪೀಠವು, ಬಂಧನ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದಿಲ್ಲವೆಂದು ಸ್ಪಷ್ಟಪಡಿಸಿದ್ದು, ಮೂವರ ಬಂಧನ ಕಾನೂನುಬದ್ಧವಾಗಿದೆ ಎಂದು ತೀರ್ಮಾನಿಸಿದೆ. ಹೀಗಾಗಿ ತಾತ್ಕಾಲಿಕ ರಿಲೀಫ್ ಅವರಿಗೆ ಸಿಗದಂತೆ ತೀರ್ಮಾನಿಸಲಾಯಿತು. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.
ಮಾರ್ಚ್ 3, 2025ರಂದು ದುಬೈನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಾಗ, ರನ್ಯಾ ರಾವ್ 14.8 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಡಿಆರ್‌ಐ ತನಿಖೆಯಲ್ಲಿ, ಆರೋಪಿಗಳು ಒಟ್ಟು 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ. ಡಿಆರ್‌ಐ ಈ ಸಂಬಂಧ ಸುಮಾರು 250 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿ, 102 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಿದೆ. ಜಾರಿ ನಿರ್ದೇಶನಾಲಯವು 34 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.
ಪ್ರಕರಣದಲ್ಲಿ ಹೋಟೆಲ್ ಉದ್ಯಮಿ ತರುಣ್ ಕೊಂಡರಾಜು ಮತ್ತು ಆಭರಣ ವ್ಯಾಪಾರಿಗಳಾದ ಸಾಹಿಲ್ ಹಾಗೂ ಭರತ್ ಜೈನ್ ಸಹ-ಆರೋಪಿಗಳಾಗಿದ್ದಾರೆ.



