ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕೆಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1 ಮತ್ತು 2ರಂದು ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಜರುಗಲಿದೆ. ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದ ದಿನದಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪಾಲ್ಗೊಳ್ಳುವ ಮೂಲಕ ಉದ್ಯೋಗ ಪಡೆಯಬಹುದಾಗಿದೆ ಎಂದರು.
ಉದ್ಯೋಗ ಆಕಾಂಕ್ಷಿಗಳು ವೆಬ್‌ಸೈಟ್ ನಲ್ಲಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಕಳೆದ 3 ದಿನದಲ್ಲಿ ಉದ್ಯೋಗ ಮೇಳದ ಲಿಂಕ್ ಮೂಲಕ ಒಟ್ಟು 743 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಅಭ್ಯರ್ಥಿಗಳು ಲಿಂಕ್ ಬಳಸಿಕೊಂಡು ನೋಂದಾಯಿಸುವ ಮೂಲಕ ಉದ್ಯೋಗ ಪಡೆಯುವಂತೆ ಸಚಿವರು ತಿಳಿಸಿದರು.
ಈ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ವಿಂಡ್ ವರ್ಡ್ ಇಂಡಿಯಾ, ಎಲ್‌ಐಸಿ, ಎಸ್‌ಬಿಐ ಲೈಫ್ ಇನ್ಸೂರೆನ್ಸ್, ಎಚ್‌ಸಿಎಲ್ ಟೆಕ್, ಹೋಂಡಾ, ವೋಲ್ವೋ ಬಸ್, ಟಾಟಾ ಎಲೆಕ್ಟ್ರಾನಿಕ್ ಸಿಸ್ಟಮ್ ಸೇರಿದಂತೆ ಹಲವು ಕಂಪನಿಗಳು ಆಗಮಿಸಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಫಾರೂಕ್ ಹುಬ್ಬಳ್ಳಿ ಸೇರಿದಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಮಲ್ಲೂರ್ ಬಸವರಾಜ, ಸಹಾಯಕ ನಿರ್ದೇಶಕಿ ಉಮಾ ಪಾಳೇಗಾರ, ಸಹಾಯಕ ಸಾಂಖ್ಯಿಕ ಅಧಿಕಾರಿ ಪಿ.ಎಸ್. ಕೋಳಿವಾಡ, ಶೇಖರ ಡಿ.ಎಚ್ ಇದ್ದರು.
ಉದ್ಯೋಗ ಮೇಳದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ರೂಮ್ ನಂಬರ್ 106 ಮತ್ತು ಉದ್ಯೋಗಾಧಿಕಾರಿಗಳ ಕಚೇರಿ ರೂಮ್ ನಂಬರ್ 215 ಜಿಲ್ಲಾಡಳಿತ ಭವನ ಗದಗ ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಮೊಬೈಲ್ ನಂಬರ್-9480151562, 9380985123, 6363330688, 903680429, 9008234012 ಸಂಪರ್ಕಿಸಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.