ವಿಜಯಸಾಕ್ಷಿ ಸುದ್ದಿ, ಗದಗ: ತೋಂಟದಾರ್ಯ ಮಠದ ಜಾತ್ರೆ ಜುರುಗುವ ಸ್ಥಳದ ವಿಚಾರವಾಗಿ ಇನ್ನು ಮುಂದೆ ಕೇವಲ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದವರು ಈಗ ಮತ್ತೆ ಬಂದ್‌ಗೆ ಕರೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಕಾರಣಕ್ಕೂ ಬಂದ್‌ಗೆ ಅವಕಾಶ ನೀಡಬಾರದು ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಹೇಳಿದರು.
ಶನಿವಾರ ಶ್ರೀಮಠದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಿಯೂ ಇಲ್ಲದ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಹೆಸರಿನಲ್ಲಿ ರಾಜು ಖಾನಪ್ಪವನರ, ತೋಂಟದಾರ್ಯ ಮಠದ ವಿಚಾರವಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಂಥವರ ವಿರುದ್ಧ ಶ್ರೀಮಠ ಸೂಕ್ತ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ತೋಂಟದಾರ್ಯ ಮಠದ ರಥಬೀದಿ ವಿಚಾರವಾಗಿ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ರಸ್ತೆ ಶ್ರೀಮಠಕ್ಕೆ ಸೇರಿದ್ದು ಎಂದು ನಗರಸಭೆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ತರುವಾಯ ರಾಜು ಖಾನಪ್ಪನವರ, ಇನ್ನು ಮುಂದೆ ಬಹಿರಂಗ ಹೋರಾಟ ನಡೆಸುವುದಿಲ್ಲ, ಕಾನೂನು ಹೋರಾಟ ಮಾತ್ರ ಮಾಡುವುದಾಗಿ ಹೇಳಿದ್ದರು. ಈಗ ಮತ್ತೆ ಗದಗ ಬಂದ್‌ಗೆ ಕರೆ ಕೊಟ್ಟಿರುವುದರ ಹಿಂದೆ ಪ್ರಚಾರದ ತಂತ್ರ ಅಡಗಿದೆ ಎಂದು ಆರೋಪಿಸಿದರು.
ರಥೋತ್ಸವ ನಡೆದು 40 ದಿನಗಳವರೆಗೆ ಮಾತ್ರ ಜಾತ್ರೆ ನಡೆಯುತ್ತದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಪರವಾನಗಿ ಪಡೆಯಲಾಗಿದೆ. ಟೆಂಡರ್ ಪಾರದರ್ಶಕವಾಗಿ ನಡೆಸಿದ್ದೇವೆ. ತೆರಿಗೆಯನ್ನೂ ಭರಿಸುತ್ತೇವೆ. ಇದೇ ಮೇ 29ಕ್ಕೆ ಜಾತ್ರೆ ಕೊನೆಗೊಳ್ಳಲಿದೆ. ಇಷ್ಟಾಗಿಯೂ ಜಾತ್ರೆ ಮುಗಿಯಲು ಇನ್ನು ಕೇವಲ 3 ದಿನ ಬಾಕಿ ಇರುವಾಗ ಬಂದ್ ಕರೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಶ್ರೀಮಠ ಹಿಂದಿನಿAದಲೂ ಕೋಮು ಸೌಹಾರ್ದತೆಗೆ ಹೆಸರಾಗಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಸಾರ್ವಜನಿಕ ಉದ್ದೇಶಕ್ಕೆ ಶ್ರೀಮಠದ ಬೆಲೆಬಾಳುವ ಆಸ್ತಿಯನ್ನು ದಾನವಾಗಿ ನೀಡಿದ ಹೆಗ್ಗಳಿಕೆಯನ್ನೂ ಹೊಂದಿದೆ. ಆದರೂ ಕೆಲವರು ಶ್ರೀಮಠದ ಲಿಂಗೈಕ್ಯ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಾನೂನಿನ ಮೂಲಕವೇ ಕಡಿವಾಣ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್, ಮಂಜುನಾಥ ಐಲಿ, ಶೇಕಣ್ಣ ಕವಳಿಕಾಯಿ, ಮಾರ್ತಾಂಡಪ್ಪ ಹಾದಿಮನಿ, ವಿದ್ಯಾಧರ ದೊಡ್ಡಮನಿ, ಪ್ರಕಾಶ ಅಸುಂಡಿ, ಐ.ಬಿ. ಬೆನಕೊಪ್ಪ, ಚಂದ್ರಕಾಂತ ಚವ್ಹಾಣ, ಚಂದ್ರು ತಡಸದ, ಕೊಟ್ರೇಶ ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀಮಠದ ಮುಂದಿನ ರಸ್ತೆಯಲ್ಲಿ ವ್ಯಾಪಾರ ನಡೆಸಲು ಸ್ಥಳೀಯ ವ್ಯಕ್ತಿಗೆ ಟೆಂಡರ್ ನೀಡಲಾಗಿದೆ. ಶೇ. 88ರಷ್ಟು ಜನ ಸ್ಥಳೀಯರಿಗೆ ನೀಡಲಾಗಿದ್ದು, ಕೇವಲ ಶೇ. 10-12ರಷ್ಟು ಹೊರ ರಾಜ್ಯದವರಾಗಿದ್ದಾರೆ. ಆದರಿವರು, ಒಂದೇ ಸಮುದಾಯದ ಜನರಿಗೆ ನೀಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ನಮ್ಮ ಬಳಿ ವ್ಯಾಪಾರಸ್ಥರ ಪಟ್ಟಿ ಇದೆ, ಯಾರು ಯಾವ ಸಮುದಾಯಕ್ಕೆ ಸೇರಿದ್ದಾರೆ ಎನ್ನುವುದನ್ನು ಅವರೇ ನಿರ್ಧರಿಸಲಿ.
– ಡಾ. ಧನೇಶ ದೇಸಾಯಿ.
ಜಾತ್ರಾ ಕಮಿಟಿ ಅಧ್ಯಕ್ಷರು.