ವಿಜಯಸಾಕ್ಷಿ ಸುದ್ದಿ, ಕಲಬುರ್ಗಿ: ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು ಹೆಚ್ಚು ಅಭಿವೃದ್ಧಿಯಾದರೆ ದೇಶಕ್ಕೆ ಬಹುದೊಡ್ಡ ಶಕ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ತಾಜ್ ಸುಲ್ತಾನಪುರದಲ್ಲಿ ಚಿನ್ನದ ಕಂತಿ ಸಾಂಸ್ಕೃತಿಕ ಸಭಾಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸ್ವಾತಂತ್ರ್ಯ ಬಂದು 77 ವರ್ಷಗಳು ಗತಿಸಿದರೂ ಇನ್ನೂ ಹಲವಾರು ಹಳ್ಳಿಗಳಿಗೆ ಓಡಾಡುವ ಒಳ್ಳೆಯ ರಸ್ತೆ, ಶುದ್ಧವಾದ ಕುಡಿಯುವ ನೀರು, ಓದುವ ಮಕ್ಕಳಿಗೆ ಉತ್ತಮವಾದ ಶಾಲೆಗಳಿಲ್ಲ. ನಗರ ಪ್ರದೇಶಗಳು ಹೆಚ್ಚು ಬೆಳೆಯುತ್ತಾ ಅತಿಯಾದ ಜನ ಸಂಖ್ಯೆಯಿಂದ ತುಂಬಿ ತುಳುಕುತ್ತಿವೆ. ಹಳ್ಳಿಯ ಜನ ನಗರಕ್ಕೆ ಸೇರುವುದರಿಂದ ಗ್ರಾಮೀಣ ಭಾಗದಲ್ಲಿ ದುಡಿಯುವ ಜನರು ಇಲ್ಲದಂತಾಗಿದೆ. ಇದರಿಂದಾಗಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಜನರ ಕೊರತೆಯಾಗಿದೆ. ನಗರಗಳಂತೆ ಹಳ್ಳಿಗಳು ಅಭಿವೃದ್ಧಿಯಾದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಆದ್ದರಿಂದ ಪಕ್ಷಾತೀತವಾಗಿ ಜಾತ್ಯಾತೀತವಾಗಿ ನಮ್ಮೆಲ್ಲ ರಾಜಕೀಯ ಧುರೀಣರು ಗಮನಹರಿಸುವ ಅವಶ್ಯಕತೆ ಇದೆ ಎಂದರು.
ಕಲಬುರ್ಗಿ ಗ್ರಾಮೀಣ ಭಾಗದ ಶಾಸಕ ಬಸವರಾಜ್ ಮತ್ತಿಮಡು ಸಮಾರಂಭ ಉದ್ಘಾಟಿಸಿ ಶ್ರೀ ಮಠದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಕಲಬುರ್ಗಿ ದಕ್ಷಿಣ ಭಾಗದ ಶಾಸಕ ಅಲ್ಲಮಪ್ರಭು ಪಾಟೀ¯ ಮಾತನಾಡಿ, ಮುಂಬರುವ ದಿನಗಳಲ್ಲಿ ಸಭಾಂಗಣ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾತು ಕೊಟ್ಟರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಮಾತನಾಡಿ, ಮಠ ಮಂದಿರಗಳು ಸಾರ್ವಜನಿಕವಾಗಿ ಜನರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿವೆ. ನನ್ನ ಅಧಿಕಾರದ ಸಂದರ್ಭದಲ್ಲಿ ಬಹಳಷ್ಟು ಸಂಘ-ಸAಸ್ಥೆಗಳಿಗೆ, ಮಂದಿರಗಳಿಗೆ ವಿಶೇಷ ಅನುದಾನ ಕೊಟ್ಟು ಅಭಿವೃದ್ಧಿಪಡಿಸಿದ ಸಂತೃಪ್ತಿ ನನಗಿದೆ ಎಂದರು.
ಸಮಾರಂಭದಲ್ಲಿ ಸ್ಟೇಷನ್ ಬಬಲಾದ ಬೃಹನ್ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಚೌದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತೊನಸಿನಹಳ್ಳಿ ಚರಂತೆಶ್ವರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು. ಕಾಂಗ್ರೆಸ್ ಧುರೀಣ ನೀಲಕಂಠರಾವ್ ಮೂಲಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಟು ದಿನಗಳಿಂದ ನಡೆದುಕೊಂಡು ಬಂದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಪುರಾಣವನ್ನು ಸಿದ್ದೇಶ್ವರ ಶಾಸ್ತ್ರಿಗಳು ಮಂಗಲಗೊಳಿಸಿದರು.
ಸಮಾರಂಭಕ್ಕೂ ಮುನ್ನ ಭವ್ಯ ಮೆರವಣಿಗೆಯೊಂದಿಗೆ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಯಿತು.
ನೇತೃತ್ವ ವಹಿಸಿದ ಶ್ರೀನಿವಾಸ್ ಸರಡಗಿ ಡಾ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಈ ಗ್ರಾಮದ ಚಾರಿತ್ರಿಕ ಇತಿಹಾಸದಲ್ಲಿ ಅವಿಸ್ಮರಣೀಯ ದಿನ. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಶುಭಾಗಮನದಿಂದ ಶ್ರೀಮಠ ಮತ್ತು ಸುಲ್ತಾನ್‌ಪುರ ಗ್ರಾಮ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯಾಗುವುದೆಂಬ ನಂಬಿಕೆ ನಮಗಿದೆ. ಕಲ್ಬುರ್ಗಿ ಜಿಲ್ಲಾ ಕೇಂದ್ರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಭವ್ಯ ಸಮಾರಂಭ ಹಮ್ಮಿಕೊಳ್ಳುವ ಕಾರ್ಯಕ್ಕೆ ಎಲ್ಲ ರಾಜಕೀಯ ಧುರೀಣರ ಸಹಕಾರ ಅಗತ್ಯವೆಂದರು.