ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಇನ್ನೇನೂ ಕೆಲವೇ ದಿನಗಳು ಬಾಕಿಯಿದ್ದು, ಫೆಬ್ರವರಿ 26ರಂದು ವಿವಾಹ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ. ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಮಧ್ಯೆ, ಈ ಸ್ಟಾರ್ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ವಿಜಯ್–ರಶ್ಮಿಕಾ ಇದೀಗ ಮತ್ತೆ ಹೊಸ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಸಿನಿಮಾಕ್ಕೆ ‘ರಣಬಾಲಿ’ (Ranabaali) ಎಂದು ಶೀರ್ಷಿಕೆ ಇಡಲಾಗಿದ್ದು, ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಇದು ವಿಜಯ್ ದೇವರಕೊಂಡ ಅವರ 14ನೇ ಸಿನಿಮಾ ಆಗಿದೆ.
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಈ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ವಿಜಯ್ ದೇವರಕೊಂಡ ಅವರು ‘ರಣಬಾಲಿ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ಅವರಿಗೆ ‘ಜಯಮ್ಮ’ ಎಂಬ ಪಾತ್ರ ನೀಡಲಾಗಿದೆ.
ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾದಲ್ಲಿ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ಹಿಂಸಾಚಾರ ಮತ್ತು ಹತ್ಯಾಕಾಂಡದ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಲಾಗಿದೆ. ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಯುವಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಅಜಯ್–ಅತುಲ್ ಸಂಗೀತ ನೀಡುತ್ತಿದ್ದು, ರಾಹುಲ್ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.



