ಮಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್ವೇಸ್ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನ ಸೇವೆ ಆರಂಭವಾಗಲಿದೆ.
ಜಜೀರಾ ಏರ್ವೇಸ್ ಸಂಸ್ಥೆ ಮಂಗಳೂರು, ಕೋಝಿಕ್ಕೋಡ್, ತಿರುಚಿರಾಪಳ್ಳಿ ಮತ್ತು ಕಣ್ಣೂರು ಸೇರಿದಂತೆ ಭಾರತದ ನಾಲ್ಕು ನಗರಗಳಿಗೆ ದಮ್ಮಮ್ ವಿಮಾನ ನಿಲ್ದಾಣದ ಮೂಲಕ ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಮಂಗಳೂರಿಗೆ ಏಪ್ರಿಲ್ 9ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ವಿಮಾನಗಳು ಸಂಚರಿಸಲಿವೆ.
ಜೆ9 3417 ಸಂಖ್ಯೆಯ ವಿಮಾನವು ಕುವೈತ್ನಿಂದ ಬೆಳಿಗ್ಗೆ 8:40ಕ್ಕೆ ಹೊರಟು, ದಮ್ಮಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರು ತಲುಪಲಿದೆ. ಹಿಂದಿರುಗುವ ಜೆ9 3418 ವಿಮಾನವು ಮಂಗಳೂರಿನಿಂದ ಸಂಜೆ 4:55ಕ್ಕೆ ಹೊರಟು, ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. ಒಟ್ಟು ಪ್ರಯಾಣದ ಅವಧಿ ಸುಮಾರು 6 ಗಂಟೆಗಳಷ್ಟಿರುತ್ತದೆ.
ಕೊರೋನಾ ಅವಧಿಯಲ್ಲಿ ಮಂಗಳೂರಿಗೆ ವಿಶೇಷ ವಿಮಾನ ಸೇವೆ ಒದಗಿಸಿದ್ದ ಸಂಸ್ಥೆ, ಇದೀಗ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆಯನ್ನು ಪುನರಾರಂಭಿಸಲು ನಿರ್ಧರಿಸಿದೆ.
ಈ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್ವೇಸ್ನ ಸೇವೆ 12 ನಗರಗಳಿಗೆ ವಿಸ್ತರಿಸಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂ ನಗರಗಳಿಗೆ ಈಗಾಗಲೇ ವಿಮಾನ ಸೇವೆ ನೀಡಲಾಗುತ್ತಿದೆ.
ದಕ್ಷಿಣ ಭಾರತದ ಪ್ರಯಾಣಿಕರು ತಮ್ಮ ತವರು ನಗರಗಳಿಗೆ ಸುಲಭವಾಗಿ ಸಂಪರ್ಕ ಹೊಂದಲು ಈ ಸೇವೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತನ್ ಪಶುಪತಿ ತಿಳಿಸಿದ್ದಾರೆ.



