ಬೆಂಗಳೂರು: ಐಪಿಎಲ್ ಪಂದ್ಯಗಳ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಮ್ಮ ಮೆಟ್ರೋ ಸೇವೆಯನ್ನು ಮತ್ತೆ ವಿಸ್ತರಿಸಿದೆ.
ಏಪ್ರಿಲ್ 5ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದ ಹಿನ್ನೆಲೆ, ಮೆಟ್ರೋ ಸಂಚಾರವನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಈ ಪಂದ್ಯವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭಿಮಾನಿಗಳ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11:00ರಿಂದ ಮಧ್ಯರಾತ್ರಿ 2:00ರವರೆಗೆ ಲಭ್ಯವಿರಲಿದೆ.
ಕೊನೆಯ ರೈಲುಗಳ ಸಮಯ ಹೀಗಿದೆ:
- ವೈಟ್ಫೀಲ್ಡ್ (ಕಾಡುಗೋಡಿ): ರಾತ್ರಿ 12:30
- ಚೆಲ್ಲಘಟ್ಟ: ರಾತ್ರಿ 12:45
- ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ರಾತ್ರಿ 12:45
- ಬೊಮ್ಮಸಂದ್ರ: ರಾತ್ರಿ 12:30
- ಆರ್.ವಿ. ರಸ್ತೆ: ರಾತ್ರಿ 2:00
- ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್): ರಾತ್ರಿ 1:30 (ನಾಲ್ಕು ದಿಕ್ಕುಗಳಿಗೆ)
ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರ ಅನುಕೂಲಕ್ಕಾಗಿ ಡಿಜಿಟಲ್ ಟಿಕೆಟ್ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಕಬ್ಬನ್ ರಸ್ತೆ ಭಾಗದಿಂದ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಕೆ ಮಾಡಬೇಕಾಗಿದ್ದು, ಲಿಂಕ್ ರಸ್ತೆ ಭಾಗದಿಂದ ಬರುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಬಳಸುವಂತೆ ಸೂಚಿಸಲಾಗಿದೆ.
ಇದಲ್ಲದೆ, ಪಂದ್ಯ ದಿನಗಳಲ್ಲಿ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎರಡು ಚಕ್ರ ವಾಹನಗಳಿಗೆ ₹30 ಹಾಗೂ ಕಾರುಗಳಿಗೆ ₹60 ಶುಲ್ಕ ನಿಗದಿ ಮಾಡಲಾಗಿದ್ದು, ಈ ದರವು ಆ ದಿನದ ಮೆಟ್ರೋ ಸೇವೆ ಮುಗಿಯುವವರೆಗೆ ಮಾನ್ಯವಾಗಿರುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.



