ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಎಸ್, ಬೆಂಗಳೂರು ಜಲಮಂಡಳಿಯು ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಏಪ್ರಿಲ್‌ನಿಂದ ಮೂರು ತಿಂಗಳ ಅವಧಿಗೆ ಶೇ100ರಷ್ಟು ಬಡ್ಡಿ ಮನ್ನಾ ಯೋಜನೆ ಜಾರಿಗೆ ತರಲಾಗಿದೆ.
ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ ನೀರಿನ ಬಿಲ್ ಪಾವತಿಸಿದರೆ ಶೇ100ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಗೃಹ, ವಾಣಿಜ್ಯ ಹಾಗೂ ಕೈಗಾರಿಕಾ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ. ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯ ಎಲ್ಲಾ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು. ಈ ವಿಶೇಷ ಅವಕಾಶವನ್ನು ಮುಂದಿನ ಮೂರು ತಿಂಗಳಲ್ಲಿ ಬಳಸಿಕೊಳ್ಳುವಂತೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.



