ಬೆಂಗಳೂರು: ರಾಜ್ಯದ ಹೋಟೆಲ್ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಸಿಕ್ಕಿದೆ. ಹೆಚ್ಚುವರಿಯಾಗಿ 1,000 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಇಂದು ಗ್ಯಾಸ್ ಕಂಪನಿಗಳು ಹಾಗೂ ಹೋಟೆಲ್ ಸಂಘದ ಜೊತೆ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಈಗಾಗಲೇ ಪೂರೈಕೆ ಆಗುತ್ತಿರುವ ಸಿಲಿಂಡರ್‌ಗಳಿಗೆ ಹೆಚ್ಚುವರಿಯಾಗಿ 1,000 ಸಿಲಿಂಡರ್ ಸೇರಿಸಿ ಒಟ್ಟು 10,000 ಸಿಲಿಂಡರ್ ಪೂರೈಕೆ ಮಾಡುವುದಾಗಿ ಹೇಳಿದರು.
ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ನೋಂದಣಿ ಕಡ್ಡಾಯ ಮಾಡಲಾಗಿದೆ. ಗೇಲ್ ಕಂಪನಿಯಲ್ಲಿ ಒಂದು ವಾರದೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸದಿದ್ದರೆ ಗ್ಯಾಸ್ ಪೂರೈಕೆ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಕ್ರಮ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ 10,000 ಸಿಲಿಂಡರ್‌ಗಳನ್ನು ಹೋಟೆಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಪಿಜಿ ಸೇರಿದಂತೆ ವಿವಿಧ ವಲಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕಳೆದ ವಾರ 1,000 ಸಿಲಿಂಡರ್‌ಗಳನ್ನು ಮಾತ್ರ ಹೋಟೆಲ್‌ಗಳಿಗೆ ನೀಡಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.
ಮುಂದಿನ ಸೋಮವಾರ ಮತ್ತೆ ಹೋಟೆಲ್ ಮಾಲೀಕರ ಜೊತೆ ಸಭೆ ನಡೆಸಲಾಗುವುದು ಎಂದೂ ಹೇಳಿದರು. ಇನ್ನು ಹೋಟೆಲ್ ಮಾಲೀಕರ ವಿದ್ಯುತ್ ಬಿಲ್ ಕಡಿತದ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದ್ದು, ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಪ್ರತಿ ಯೂನಿಟ್‌ಗೆ 2 ರೂ. ಕಡಿಮೆ ಮಾಡುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.



