100 ಗ್ರಾಂ ತೂಕ ಹೆಚ್ಚಳದಿಂದ ಕುಸ್ತಿ ಪಂದ್ಯದ ಫೈನಲ್ ನಿಂದ ಅನರ್ಹ ಗೊಂಡಿದ್ದ ವಿನೇಶ್ ಫೋಗಟ್ ಬೆಳ್ಳಿ ಪದಕದ ತೀರ್ಪು ಇಂದು ಪ್ರಕಟವಾಗಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ ದೇಹತೂಕ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚು ಕಂಡು ಬಂದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವ ಅವಕಾಶ ಕೈಜಾರಿತ್ತು.
ಅನರ್ಹ ಮಾಡಿದ್ದ ಬಗ್ಗೆ ಪ್ರಶ್ನಿಸಿ ವಿನೇಶ್ ಅವರು ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಒಲಿಂಪಿಕ್ಸ್‌ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿ ಒಲಿಂಪಿಕ್ಸ್ ಮುಕ್ತಾಯಕ್ಕೂ ಮುನ್ನ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು.
ಆದರೆ 2 ಬಾರಿ ಈ ತೀರ್ಪು ಪ್ರಕಟ ಮುಂದೂಡಿಕೆಯಾಗಿತ್ತು. ಇದೀಗ ಇಂದು ಅಧಿಕೃತವಾಗಿ ತೀರ್ಪು ಪ್ರಕಟಿಸುವುದಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತಿಳಿಸಿದೆ. ರಾತ್ರಿ 9:30ಕ್ಕೆ ಈ ತೀರ್ಪು ಪ್ರಕಟಗೊಳ್ಳಲಿದೆ.
ಒಂದೊಮ್ಮೆ ವಿನೇಶ್ಗೆ ಬೆಳ್ಳಿ ಪದಕ ನೀಡುವಂತೆ ತೀರ್ಪು ಪ್ರಕಟಗೊಂಡರೆ ಭಾರತದ ಪದಕ ಸಂಖ್ಯೆ 7ಕ್ಕೆ ಏರಲಿದೆ. ಜತೆಗೆ ವಿನೇಶ್ ಐತಿಹಾಸಿಕ ಪದಕ ಗೆದ್ದ ಭಾರತೀಯ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ.