ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಮಂಡಳಿ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗಳಾಗಿ ಪರಿವರ್ತಿಸಿದೆ.
ಈ ಪಟ್ಟಿಯಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ಕ್ರಮದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.
ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದಾಗ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಸುಮಾರು 30% ಹಾಗೂ ಸಾಮಾನ್ಯ ಟಿಕೆಟ್‌ಗಳಲ್ಲಿ 10–15%ರವರೆಗೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.
ಖಾಯಂಗೊಂಡ ಎಕ್ಸ್‌ಪ್ರೆಸ್ ರೈಲುಗಳು:
- ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ (16281/16282) – ವಾರಕ್ಕೊಮ್ಮೆ
- ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (16563/16564) – ವಾರಕ್ಕೊಮ್ಮೆ
- SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (16559/16560) – ವಾರಕ್ಕೊಮ್ಮೆ
- ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (16555/16556) – ವಾರಕ್ಕೊಮ್ಮೆ
- ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (17363/17364) – ವಾರಕ್ಕೊಮ್ಮೆ
- ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (10109/10110)
ಮೆಮು / ಡೆಮು ರೈಲುಗಳು:
- ಬೆಂಗಳೂರು – ಹೊಸೂರು ಮೆಮು (66595/96) – ಪ್ರತಿದಿನ
- ಹುಬ್ಬಳ್ಳಿ – ವಿಜಯಪುರ ಮೆಮು (66501/02) – ಪ್ರತಿದಿನ
- ಬೆಂಗಳೂರು – ಅಶೋಕಪುರಂ ಮೆಮು (66597/98) – ಪ್ರತಿದಿನ
- ಬೆಂಗಳೂರು – ಅಶೋಕಪುರಂ ಮೆಮು (06213/14) – ವಾರಕ್ಕೆ 3 ಬಾರಿ
- ಬಂಗಾರಪೇಟೆ – SMVT ಬೆಂಗಳೂರು ಮೆಮು (66537/38) – ಪ್ರತಿದಿನ
- ಹೊಸಪೇಟೆ – ಹುಬ್ಬಳ್ಳಿ ಡೆಮು (76507/08) – ವಾರಕ್ಕೊಮ್ಮೆ
- ಬಳ್ಳಾರಿ – ದಾವಣಗೆರೆ ಡೆಮು (76509/10) – ವಾರಕ್ಕೆ 6 ದಿನ
- ಬೆಂಗಳೂರು – ಹಾಸನ ಡೆಮು (66525/26) – ವಾರಕ್ಕೆ 6 ದಿನ
- ಬಳ್ಳಾರಿ – ಹೊಸಪೇಟೆ ಡೆಮು (07397/98) – ವಾರಕ್ಕೆ 6 ದಿನ
ಇತರೆ ಪ್ಯಾಸೆಂಜರ್ ರೈಲುಗಳು:
ಬೆಂಗಳೂರು–ಚನ್ನಪಟ್ಟಣ, ಮೈಸೂರು–SMVT ಬೆಂಗಳೂರು, ಯಶವಂತಪುರ–ಹಿಂದೂಪುರ ಹಾಗೂ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ರೈಲುಗಳನ್ನೂ ಖಾಯಂ ಮಾಡಲಾಗಿದೆ. ಈ ನಿರ್ಧಾರದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಲಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ಕ್ರಮ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.



