ಬೆಂಗಳೂರು: ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ಬಿಎಂಆರ್‌ಸಿಎಲ್ ನೀಡಿದೆ. ಮೊದಲು ಕೇವಲ 3 ರೈಲುಗಳ ಸಂಚಾರವಿತ್ತು. ನಂತರದಲ್ಲಿ ಇನ್ನೊಂದು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಈಗ BMCRL ನ ನಿರ್ಧಾರದಂತೆ 5 ನೇ ರೈಲು ಸಂಚಾರ ಶುರುವಾಗಲಿದೆ. ಇಂದಿನಿಂದ ರೈಲಿನ ಟೆಸ್ಟಿಂಗ್ ಆರಂಭವಾಗಲಿದ್ದು, ಶೀಘ್ರದಲ್ಲೇ ರೈಲು ಕಾರ್ಯ ರೂಪಕ್ಕೂ ಬರಲಿದೆ.
ಆರ್.ವಿ ರೋಡಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರ ಮಾಡಲು ಕಲ್ಕತ್ತಾದ ಟಿಟಾಗರ್ನಿಂದ ಐದನೇ ಮೆಟ್ರೋ ರೈಲು ಬಂದಿದ್ದು, ಇಂದಿನಿಂದ ಐದನೇ ರೈಲಿನ ಟೆಸ್ಟಿಂಗ್ ಕಾರ್ಯ ಆರಂಭವಾಗಲಿದೆ. ಸದ್ಯದಲ್ಲೇ ಈ ಐದನೇ ರೈಲು ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲಿದೆ ಎಂದು BMRCL ತಿಳಿಸಿದೆ.
ಈ ಮಾರ್ಗಕ್ಕೆ ಆಗಸ್ಟ್- 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. BMRCL ಬಳಿ ಯೆಲ್ಲೋ ಲೈನ್ ನಲ್ಲಿ ಸಂಚಾರ ಮಾಡಲು ನಾಲ್ಕು ರೈಲುಗಳಿದ್ದ ಕಾರಣ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿತ್ತು. ಐದನೇ ರೈಲು ಟ್ರ್ಯಾಕ್ ಗಿಳಿಯುತ್ತಿದ್ದಂತೆ ಹದಿನೈದು ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್ನಿಂದ ಹೊಸ ಬೋಗಿಗಳು ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ ಎಂದು BMRCL ತಿಳಿಸಿತ್ತು. ಇಂದಿನಿಂದ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳ ಪರೀಕ್ಷೆಗೆ ರೈಲು ಒಳಪಡಲಿದೆ.