ಬೆಂಗಳೂರು, ಜನವರಿ 29: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ಸಾಂದರ್ಭಿಕ ರಜೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸುವುದು, ಕೆಲಸದ ಒತ್ತಡ ಕಡಿಮೆ ಮಾಡುವುದು ಹಾಗೂ ವೈಯಕ್ತಿಕ ಜೀವನ ಮತ್ತು ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ. ಇದರಿಂದ ಮನೋಬಲ ಹೆಚ್ಚಾಗಿ, ಕಾರ್ಯಕ್ಷಮತೆಯೂ ಉತ್ತಮವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಒಳಾಡಳಿತ ಇಲಾಖೆ, ಪೊಲೀಸ್ ಸಿಬ್ಬಂದಿಗೆ ಈ ರೀತಿಯ ರಜೆ ಸೌಲಭ್ಯ ಕಲ್ಪಿಸುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಅಧಿಕೃತ ಪತ್ರ ಬರೆದಿತ್ತು. ಈ ಪತ್ರವನ್ನು ಪರಿಶೀಲಿಸಿದ ನಂತರ ಡಿಜಿ ಡಾ. ಸಲೀಂ ಅವರು ಕಡ್ಡಾಯ ರಜೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಯಾರಿಗೆ ಈ ರಜೆ ಸಿಗಲಿದೆ?
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಮುಖ್ಯವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್‌ಟೇಬಲ್ (PC) ಹೆಡ್ ಕಾನ್ಸ್‌ಟೇಬಲ್ (HC) ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಈ ಶ್ರೇಣಿಯ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗಲಿದೆ.
ಆದೇಶದಲ್ಲಿ ಏನು ಉಲ್ಲೇಖಿಸಲಾಗಿದೆ?
ಪೊಲೀಸರು ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ವೈಯಕ್ತಿಕ ಜೀವನಕ್ಕೂ ಮೌಲ್ಯ ನೀಡಬೇಕು ಎಂಬ ದೃಷ್ಟಿಯಿಂದ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ಮಹತ್ವದ ದಿನಗಳಲ್ಲಿ ರಜೆ ನೀಡುವುದು ಅಗತ್ಯ ಎಂದು ಡಿಜಿ-ಐಜಿಪಿ ಹೇಳಿದ್ದಾರೆ.
ಇಂತಹ ಮಾನವೀಯ ಕ್ರಮದಿಂದ ಮನೋಬಲ ವೃದ್ಧಿ, ಒತ್ತಡ ಕಡಿಮೆ, ಕೆಲಸದ ತೃಪ್ತಿ ಹೆಚ್ಚಳ, ಶಿಸ್ತು ಮತ್ತು ಬದ್ಧತೆ ಬಲವರ್ಧನೆ, ಸಾಧ್ಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಒಳಾಡಳಿತ ಇಲಾಖೆಯ ಪಾತ್ರ
ರಾಜ್ಯ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿಯವರು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ, ಮೋಹನ್ ಕುಮಾರ್ ದಾನಪ್ಪ ಅವರು ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಎಎಸ್‌ಐ ಹಂತದವರೆಗಿನ ಸಿಬ್ಬಂದಿಗೆ ಈ ರಜೆ ನೀಡಬೇಕು ಎಂದು ಮನವಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.



