ಬೆಂಗಳೂರು: ನಗರದಲ್ಲಿ ಇಂದಿನಿಂದ ಮತ್ತೆ ಬೈಕ್ ಟ್ಯಾಕ್ಸಿ ಸೇವೆಗಳು ಪುನರಾರಂಭಗೊಂಡಿವೆ. ಇದರ ಮೂಲಕ ಆಟೋ ಹಾಗೂ ಕಾರ್ ಟ್ಯಾಕ್ಸಿಗಳಿಗೆ ದುಬಾರಿ ದರ ಕಟ್ಟುತ್ತಿದ್ದ ಪ್ರಯಾಣಿಕರಿಗೆ ತುಸು ನೆಮ್ಮದಿ ಸಿಗಲಿದೆ. ರಾಜ್ಯ ಸರ್ಕಾರವು ಜೂನ್ 16ರಿಂದ ಸುರಕ್ಷತಾ ಕಾರಣಕ್ಕಾಗಿ ಬೈಕ್ ಟ್ಯಾಕ್ಸಿಗಳ ಸೇವೆಗಳನ್ನು ನಿಷೇಧಿಸಿತ್ತು.
ನಂತರ ಎಲ್ಲ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಕಂಪನಿಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿದ್ದವು. ಆ ಸಮಯದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್‌ಟಿಓ ಅಧಿಕಾರಿಗಳು ದಂಡ ವಿಧಿಸಿ, ಕಠಿಣ ಕ್ರಮ ಕೈಗೊಂಡಿದ್ದರು. ಇದರಿಂದ ಕಂಪನಿಗಳಿಗೆ ಸೇವೆಗಳನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು.
ಇದರ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸೇವೆ ರದ್ದು ಪ್ರಶ್ನಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದವು. ಸದ್ಯ ಬೈಕ್ ಟ್ಯಾಕ್ಸಿ ಸಂಬಂಧ ನೀತಿ ಚೌಕಟ್ಟು ನಿಗದಿಪಡಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಸದ್ಯ ರಾಜ್ಯ ಸರ್ಕಾರ ಇಂದಿನಿಂದ ಬೈಕ್ ಟ್ಯಾಕಿ ಸೇವೆಯನ್ನು ಆರಂಭಿಸಿದೆ.