ಬೆಂಗಳೂರು:- ಬೆಂಗಳೂರಿನ ಕಬ್ಬನ್ ಪಾರ್ಕ್‌ಗೆ ವೀಕೆಂಡ್ ನಲ್ಲಿ ಹೋಗುವವರಿಗೆ ಸಂಚಾರಿ ಪೊಲೀಸರಿಂದ ಗುಡ್ ನ್ಯೂಸ್ ಸಿಕ್ಕಿದೆ. ಉದ್ಯಾನವನಕ್ಕೆ ತೆರಳುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ. ಇನ್ನು ಮುಂದೆ ವಾರಾಂತ್ಯದಲ್ಲಿ ಕಬ್ಬನ್ ಪಾರ್ಕ್‌ಗೆ ತೆರಳುವವರು ನಿರ್ದಿಷ್ಟ ಪ್ರದೇಶದಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಟ್ರಾಫಿಕ್ ಪೊಲೀಸರು ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವ ಸಾರ್ವಜನಿಕರು ಪ್ರತಿ ಭಾನುವಾರದಂದು ಹಾಗೂ ಹೈಕೋರ್ಟ್ ಕಾರ್ಯನಿರ್ವಹಿಸದೇ ಇರುವ ಶನಿವಾರಗಳಂದು ಹಳೆಯ ಕೆಜಿಐಡಿ ಕಟ್ಟಡದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಬ್ಬನ್ ಪಾರ್ಕ್ ಇತರ ಪಾರ್ಕಿಂಗ್ ಪ್ರದೇಶಗಳಿಗೆ ಅಸ್ತಿತ್ವದಲ್ಲಿರುವ ದರಗಳ ಪ್ರಕಾರ ಪಾವತಿ ಆಧಾರದ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದ್ದು, ಈ ಪಾರ್ಕಿಂಗ್ ಪ್ರದೇಶವು ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಮುಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವವರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇವೆ. ಕಬ್ಬನ್ ಉದ್ಯಾನವನಕ್ಕೆ ಹೋಗುವ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರಲ್ಲಿ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.