ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ ಉತ್ತಮ ಸಾಧನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ ಉತ್ತಮ ಸಾಧನೆ ದಾಖಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯಾದ್ಯಂತ ಯೋಜನೆಗಳ ಅನುಷ್ಠಾನ ಶೇ.99ರಷ್ಟು ಯಶಸ್ವಿಯಾಗಿ ನಡೆದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.

Advertisement

ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತಂತೆ ಜಿ.ಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಸೆಪ್ಟೆಂಬರ್ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 2.57 ಲಕ್ಷ ಫಲಾನುಭವಿಗಳ ಪೈಕಿ ಶೇ.99.03ರಷ್ಟು ಮಹಿಳೆಯರಿಗೆ ಪ್ರಯೋಜನ ತಲುಪಿದ್ದು, ರೂ.986.42 ಕೋಟಿ ಮೊತ್ತ ಬಿಡುಗಡೆಗೊಂಡಿದೆ. ಅನ್ನಭಾಗ್ಯ ಯೋಜನೆಯಡಿ 2.34 ಲಕ್ಷ ಕುಟುಂಬಗಳಿಗೆ ಶೇ.100ರಷ್ಟು ಅಕ್ಕಿ ವಿತರಣೆಯಾಗಿದ್ದು, ರೂ.216.82 ಕೋಟಿಯ ಸಹಾಯ ಲಭಿಸಿದೆ. ಗೃಹಜ್ಯೋತಿ ಯೋಜನೆಯಡಿ 2.73 ಲಕ್ಷ ಮನೆಗಳಿಗೆ ಶೇ. 98.46ರಷ್ಟು ಉಚಿತ ವಿದ್ಯುತ್ ಪ್ರಯೋಜನ ದೊರೆತಿದ್ದು, ರೂ.247.24 ಕೋಟಿ ಮೊತ್ತ ಬಿಡುಗಡೆಗೊಂಡಿದೆ. ಯುವ ನಿಧಿ ಯೋಜನೆಯಡಿ 5,800 ಯುವಕರು ಶೇ.100ರಷ್ಟು ಸಹಾಯವನ್ನು ಪಡೆದಿದ್ದು, ರೂ. 12.92 ಕೋಟಿಯ ನೆರವು ನೀಡಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಶೇ.100ರಷ್ಟು ಅನುಷ್ಠಾನಗೊಂಡಿದ್ದು, ರೂ.404.12 ಕೋಟಿಯಷ್ಟು ಪ್ರಯೋಜನ ದೊರೆತಿದೆ ಎಂದು ವಿವರಿಸಿದರು.

ಜಿಲ್ಲೆಯ ಬಸ್ ನಿಲ್ದಾಣಗಳ ಅವ್ಯವಸ್ಥೆ ಕುರಿತಂತೆ ಮಾತನಾಡಿದ ಅವರು, ಎಲ್ಲ ತಾಲೂಕಾ ಹಾಗೂ ಹೋಬಳಿ ಮಟ್ಟದ ಬಸ್ ನಿಲ್ದಾಣಗಳಲ್ಲಿನ ಕಸ ವಿಲೇವಾರಿ ಆಗಬೇಕು. ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಜೊತೆಗೆ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಲಭ್ಯವಿರುವಂತೆ ಸಂಬಂಧಿತ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.

ಬಿಪಿಎಲ್ ಕುಟುಂಬಕ್ಕೆ ಈವರೆಗೆ ಇದ್ದ 1.20 ಲಕ್ಷ ರೂ ಆರ್ಥಿಕ ಮಿತಿಯನ್ನು 2.50 ಲಕ್ಷ ರೂ.ಗಳಿಗೆ ಅಧಿಕಗೊಳಿಸುವಂತೆ ಜಿಲ್ಲಾ ಗ್ಯಾರಂಟಿ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ಸಭೆಯಲ್ಲಿನ ನಡಾವಳಿಗಳನ್ನು ಸಲ್ಲಿಸುವಂತೆ ತಿಳಿಸಲಾಯಿತು.
ಸಭೆಯಲ್ಲಿ ಯಲಬುರ್ಗಾದಿಂದ ಗಜೇಂದ್ರಗಡಕ್ಕೆ ಬೆಳಿಗ್ಗೆ ಬಸ್ ಬಾರದಿರುವ ಕುರಿತು ಹಾಗೂ ಗದಗದಿಂದ ಗಜೇಂದ್ರಗಡಕ್ಕೆ ಸಾಯಂಕಾಲ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ನೀಲಮ್ಮ ಬೋಳನವರ, ಪಿ.ಬಿ. ಅಳಗವಾಡಿ, ದೀಪಕ ಲಮಾಣಿ, ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರುಗಳಾದ ವಿವೇಕ ಯಾವಗಲ್, ಶರಣಪ್ಪ ಬೆಟಗೇರಿ, ಶಿವನಗೌಡ ಪಾಟೀಲ, ನಾಗರಾಜ ಮಡಿವಾಳರ, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದ್ದೇವರಮಠ ಸೇರಿದಂತೆ ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಲ್ಲಿಕಾರ್ಜುನ ಚಳಗೇರಿ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ರೇಶನ್ ಕಾರ್ಡ್ ರದ್ದುಪಡಿಸಿದವರ ಪಟ್ಟಿಯನ್ನು ನೋಟೀಸ್ ಬೋರ್ಡ್ನಲ್ಲಿ ಪ್ರದರ್ಶಿಸುವ ಜೊತೆಗೆ ರದ್ದತಿಗೆ ಸೂಕ್ತ ಕಾರಣವನ್ನು ತಿಳಿಸಿಕೊಡಬೇಕು. ಇಲ್ಲದಿದ್ದಲ್ಲಿ ಫಲಾನುಭವಿಗಳಿಗೆ ಗೊಂದಲ ಸೃಷ್ಟಿಯಾಗುತ್ತದೆ. ಈವರೆಗೆ ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಹಾಕಲು ಇದ್ದ ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ. ಆದರೆ ಆಹಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಗೃಹಲಕ್ಷ್ಮೀ ಯೋಜನೆಯಡಿ ಅರ್ಹರಿಗೆ ಸೌಲಭ್ಯ ವಿಳಂಬವಾಗಬಾರದು ಎಂದು ಬಿ.ಬಿ. ಅಸೂಟಿ ಸೂಚಿಸಿದರು.

ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಶಿಷ್ಟಾಚಾರದಂತೆ ಇಲಾಖಾಧಿಕಾರಿಗಳು ಆಹ್ವಾನಿಸಬೇಕು. ಈ ಕುರಿತು ಜಿ.ಪಂನಿಂದ ಸಂಬಂಧಿತ ಇಲಾಖೆಗಳಿಗೆ ಸರ್ಕಾರದ ಸುತ್ತೋಲೆ ತಲುಪಿಸಬೇಕು. ಗ್ಯಾರಂಟಿ ಸಮಿತಿಗೆ ಖುದ್ದಾಗಿ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ಅನಿವಾರ್ಯ ಸಂದರ್ಭದಲ್ಲಿ ಅನುಮತಿಯೊಂದಿಗೆ ತೆರಳಲು ಅವಕಾಶ ನೀಡಲಾಗುವುದು. ವಿನಾಕಾರಣ ಸಭೆಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸುವಂತೆ ಜಿ.ಪಂ ಉಪಕಾರ್ಯದರ್ಶಿಗಳಿಗೆ ಬಿ.ಬಿ. ಅಸೂಟಿ ನಿರ್ದೇಶನ ನೀಡಿದರು.


Spread the love

LEAVE A REPLY

Please enter your comment!
Please enter your name here