ಸರ್ಕಾರಿ ಕಾಲೇಜುಗಳಲ್ಲಿಯೂ ಉತ್ತಮ ಸಾಧನೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಡವರು ಮತ್ತು ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿರುವ ಸರಕಾರಿ ಕಾಲೇಜುಗಳಲ್ಲಿಯೂ ಸಹ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಇಲ್ಲಿನ ಮಕ್ಕಳು ಸಾಕಷ್ಟು ಪ್ರತಿಭಾವಂತರಾಗಿರುತ್ತಾರೆ. ಹಾಗಾಗಿ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ ಹಾಗೂ ವಾಣಿಜ್ಯ, ಕಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸರಕಾರಿ ಕಾಲೇಜುಗಳು ಸಹ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಫಲಿತಾಂಶದಲ್ಲಿ ಸಾಧನೆ ಮಾಡುತ್ತಿದ್ದು, ಪಟ್ಟಣದ ಸರಕಾರಿ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ. 98.18, ವಿಜ್ಞಾನ ವಿಭಾಗದಲ್ಲಿ ಶೇ. 89.47, ಹಾಗೂ ಕಲಾ ವಿಭಾಗದಲ್ಲಿ ಶೇ. 88.09 ಫಲಿತಾಂಶ ಸಾಧಿಸಿದ್ದು, ಒಟ್ಟಾರೆಯಾಗಿ ಕಾಲೇಜು ಈ ಬಾರಿ ಶೇ. 92.20ರಷ್ಟು ಉತ್ತಮ ಫಲಿತಾಂಶ ದಾಖಲಿಸಿರುವದು ಈ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮಾತನಾಡಿ, ಕಾಲೇಜು ಪ್ರತಿವರ್ಷ ಉತ್ತಮ ಸಾಧನೆ ಮಾಡುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ. ವಿಷಯವಾರು ಭೌತಶಾಸ್ತ್ರ, ಜೀವಶಾಸ್ತ್ರ, ಲೆಕ್ಕಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಕನ್ನಡ ವಿಷಯಗಳಲ್ಲಿ 100ಕ್ಕೆ 100 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ತೃತಿಯ ಸ್ಥಾನ ಗಳಿಸಿದ ಲಕ್ಷ್ಮೀ ಜಿಗಳೂರ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾಳೆ. ಕಾಲೇಜಿನ ಬೆಳವಣಿಗೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯವರು ಹಾಗೂ ಸಾರ್ವಜನಿಕರ ಸಹಕಾರ ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಇನ್ನೂ ಅನೇಕ ಸೌಕರ್ಯಗಳು ದೊರೆಯಲಿವೆ ಎಂದು ಹೇಳಿದರು.

ವೇದಿಕೆಯಲ್ಲಿ ಕಮಿಟಿಯ ನವೀನ ಬೆಳ್ಳಟ್ಟಿ, ಶಕ್ತಿ ಕತ್ತಿ, ಮೈನುದ್ದಿನ ಸೂರಣಗಿ ಉಪನ್ಯಾಸಕರುಗಳಾದ ವಿನಾಯಕ ವೇತಾಳ, ಎನ್.ಓ. ಸಾತಪೂತೆ, ಬಿ.ಎನ್. ದೊಡ್ಡಮನಿ, ಡಾ. ಬಿ.ಎಂ. ಅರಳಹಳ್ಳಿ ಮುಂತಾದವರಿದ್ದರು.

ವಿಜ್ಞಾನ ವಿಬಾಗದಲ್ಲಿ ಲಕ್ಷ್ಮೀ ಜಿಗಳೂರ ಶೇ. 96.58 ಅಂಕಗಳನ್ನು ಗಳಿಸಿ ಜಿಲ್ಲೆಗೆ 3ನೇ ಸ್ಥಾನ, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಕೀರ್ತಿ ತಂದಿದ್ದಾಳೆ. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ಮಾಡಿದೆ ಎಂದು ಸುನೀಲ ಮಹಾಂತಶೆಟ್ಟರ ಹೇಳಿದರು.


Spread the love

LEAVE A REPLY

Please enter your comment!
Please enter your name here