ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಒಟ್ಟು 2970 ದಮನಿತ ಮಹಿಳೆಯರಿದ್ದಾರೆ. 2015-16ರಿಂದ 2024-2025ನೇ ಸಾಲಿನವರೆಗೆ 187 ಮಹಿಳೆಯರಿಗೆ ಚೇತನ ಯೋಜನೆಯ ಸೌಲಭ್ಯ ನೀಡಲಾಗಿದೆ. 2016-17ರಿಂದ 2024-2025ನೇ ಸಾಲಿನವರೆಗೆ ಧನಶ್ರೀ ಯೋಜನೆಯಡಿ 174 ಜನರು ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯಲ್ಲಿ 2015-16ರಿಂದ 2024-2025ನೇ ಸಾಲಿನವರೆಗೆ 825 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ 155 ಲಿಂಗತ್ವ ಅಲ್ಪಸಂಖ್ಯಾತರು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಪ್ರಸ್ತುತ 73 ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡಲಾಗಿದೆ ಮತ್ತು ಗೃಹಲಕ್ಷ್ಮೀ ಯೋಜನೆಯಡಿ 52 ಜನ ಲಿಂಗತ್ವ ಅಲ್ಪಸಂಖ್ಯಾತರು ಸೌಲಭ್ಯ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ತಿಳಿಸಿದರು.
ಜಿಲ್ಲಾಡಳಿತ ಭವನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ ಕೆ.ಎಚ್ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿ, ಗದಗ ಜಿಲ್ಲೆಯಲ್ಲಿ ನಿಗಮದ ಯೋಜನೆಯಡಿ ಕೈಗೊಂಡ ಪ್ರಗತಿಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಅಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನುಪಮಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ಪುಷ್ಪಾ, ಸೃಷ್ಟಿ ಸಂಕುಲ ಸಂಸ್ಥೆ, ನವಚೇತನ ಹಾಗೂ ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟದ ಮುಖ್ಯಸ್ಥರು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಧನಶ್ರೀ, ಉದ್ಯೋಗಿನಿ ಯೋಜನೆಯಡಿ ಸೌಲಭ್ಯ ಪಡೆದ ಮಹಿಳೆಯರು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದಕ್ಕಾಗಿ ಹಾಗೂ ಅವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಅನುಷ್ಠಾನಕ್ಕಾಗಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ನಿಗಮದ ಯೋಜನೆಯಡಿ ಉತ್ತಮವಾಗಿ ಕೆಲಸ ಮಾಡಿ ಪ್ರಗತಿಯನ್ನು ಸಾಧಿಸಿದ್ದಾರೆ. ಅಭಿವೃದ್ಧಿ ನೀರಿಕ್ಷಕರಾದ ದಾಕ್ಷಾಯಿಣಿ ಪಾಟೀಲ ಹಾಗೂ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಮಧುಸೂದನ್ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆಂದು ಪದ್ಮಾವತಿ ಜಿ ಅಭಿಪ್ರಾಯ ವ್ಯಕ್ತಪಡಿಸಿದರು.


