ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಗದಗ ಜಿಲ್ಲೆಯಾದ್ಯಂತ ಮಹತ್ತರ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವುದು ಅಂಕಿ–ಅಂಶಗಳಿಂದ ಸ್ಪಷ್ಟವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆ ಮೂಲಕ 2.34 ಲಕ್ಷ ಜನರಿಗೆ ಅಕ್ಕಿ ವಿತರಣೆ ಆಗಿದ್ದು, ಇದರ ಅನುಷ್ಠಾನ ಪ್ರಮಾಣ ಶೇ.93.27 ಆಗಿದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 2.77 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಪ್ರಯೋಜನ ತಲುಪಿದ್ದು, ಪ್ರಗತಿ ಪ್ರಮಾಣ ಶೇ. 98.68 ಆಗಿದೆ. ಯುವನಿಧಿ ಯೋಜನೆ ಮೂಲಕ 0.059 ಲಕ್ಷ ಯುವಕರಿಗೆ ಹಣಕಾಸು ನೆರವು ತಲುಪಿದ್ದು, ಶೇ 100 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆ ಅಡಿಯಲ್ಲಿ 1127.47 ಲಕ್ಷ ಪ್ರಯಾಣಗಳು ದಾಖಲಾಗಿವೆ. ಈ ಯೋಜನೆಯೂ ಶೇ. 100ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಒಟ್ಟಾರೆ, ಪಂಚ ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ 1135.202 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಸರ್ಕಾರ ಇದಕ್ಕಾಗಿ 1758.83 ಕೋಟಿ ರೂ ವೆಚ್ಚ ಮಾಡಿದೆ ಎಂದು ವಿವರಿಸಿದರು.
ರಾಜ್ಯ ಅಧ್ಯಕ್ಷರಾದ ಎಚ್.ಎಮ್. ರೇವಣ್ಣ ಅವರ ಸೂಚನೆ ಮೇರೆಗೆ ತಾಲೂಕಿನಲ್ಲಿ 3-4 ಗ್ರಾಮ ಪಂಚಾಯಿತಿ ಫಲಾನುಭವಿಗಳ ಸಮಸ್ಯೆ ಕುರಿತು ಜನಸ್ಪಂದನ ಸಭೆ ಜರುಗಿಸಲು ಸೂಚಿಸಿದ್ದಾರೆ ಅದನ್ನು ಸರಿಯಾಗಿ ನಿರ್ವಹಿಸೋಣ. ಹಿಂದಿನ ಸಭೆಗಳ ನಡಾವಳಿಗಳು ಹಾಗೂ ಅನುಸರಣ ವರದಿಗಳನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಿ ಕೈಗೊಂಡ ಕ್ರಮದ ಕುರಿತು ಸಂಬಂದಿತ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ತಾಲೂಕ ಅಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡು ಗ್ಯಾರಂಟಿ ಅನುಷ್ಠಾನಕ್ಕೆ ಹಾಗೂ ಅರ್ಹರಿಗೆ ಯೋಜನೆ ತಲುಪಿಸುವಲ್ಲಿ ಇರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳಾದ ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಸಮಿತಿ ಸದಸ್ಯರು ಹಾಗೂ ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ. ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಸಮಿತಿಯ ಸದಸ್ಯರಾದ ಡಂಬಳದ ವಿರೂಪಾಕ್ಷಪ್ಪ ಯರಾಶಿ ಅವರು ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ ಕಾರಣ ಸಭೆಯಲ್ಲಿ ಸಭೆಯ ಆರಂಭಕ್ಕೂ ಮುನ್ನ ಸದರಿಯವರಿಗೆ ಮೌನಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2025ರ ಜುಲೈ ಅಂತ್ಯದವರೆಗಿನ ಒಟ್ಟಾರೆ ಪ್ರಗತಿ ಉತ್ತಮವಾಗಿದೆ. ಇದಕ್ಕೆಲ್ಲ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರ ಮಾರ್ಗದರ್ಶನ ಕಾರಣವಾಗಿದೆ. ಯೋಜನೆ ಆರಂಭದಿಂದ ಗೃಹಲಕ್ಷ್ಮೀ ಯೋಜನೆಯಲ್ಲಿ 2.56 ಲಕ್ಷ ಫಲಾನುಭವಿಗಳಿಗೆ ನೆರವು ತಲುಪಿದ್ದು, ಇದರ ಅನುಷ್ಠಾನ ಪ್ರಮಾಣ ಶೇ.97.99 ಆಗಿದೆ. ಈ ಯೋಜನೆಯಡಿ ಜಿಲ್ಲೆಗೆ 935 ಕೋಟಿ ರೂ ಸಹಾಯ ನೀಡಲಾಗಿದೆ ಎಂದು ಬಿ.ಬಿ. ಅಸೂಟಿ ತಿಳಿಸಿದರು.