ಏಕಾಗ್ರತೆಯಿಂದ ಓದಿದರೆ ಉತ್ತಮ ಫಲಿತಾಂಶ ಸಾಧ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯಲ್ಲಿ ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಬಿಸಿಎನ್ ವಿಜನ್ ಪ.ಪೂ. ಮತ್ತು ಪದವಿ ಕಾಲೇಜುಗಳ ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಕನ್ನಡ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯಗಳ ಮೇಲಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಎರಡು ದಿನಗಳ ಕಾರ್ಯಾಗಾರ ಬುಧವಾರ ಪ್ರಾರಂಭವಾಯಿತು.

Advertisement

ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ಪರೀಕ್ಷಾ ಸಮಯ ಅತ್ಯಮೂಲ್ಯ. ವ್ಯರ್ಥ ಮಾಡಬೇಡಿ. ಪಿಯುಸಿ ಪದವಿ ಹಂತದ ಶಿಕ್ಷಣಕ್ಕೆ ಮೆಟ್ಟಿಲಾಗಿದ್ದು, ವೇಳಾಪಟ್ಟಿ ಸಿದ್ಧಪಡಿಸಿಕೊಂಡು ದೃಢ ನಿರ್ಧಾರ, ಏಕಾಗ್ರತೆಯಿಂದ ಓದಿದರೆ ಖಂಡಿತ ಉತ್ತಮ ಫಲಿತಾಂಶ ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸ್ಫರ್ಧೆಯಿದ್ದು, ಶ್ರೇಷ್ಠವಾದ ಫಲಿತಾಂಶ ನಿಮ್ಮದಾಗಬೇಕು. ಕಳೆದ 3 ದಶಕಗಳಿಂದ ಶಿಕ್ಷಣ ಸೇವೆ ಮಾಡುತ್ತಿರುವ ಬಿಸಿಎನ್ ವಿದ್ಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದ ಅವರು, ಪರೀಕ್ಷೆ ನಂತರ ನೀಟ್ ಕೋಚಿಂಗ್‌ಗೆ ಉಚಿತ ಅವಕಾಶ ಕಲ್ಪಿಸಲಾಗುವುದು ಎಂದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯ ಹಂತವಾಗಿದ್ದು, ಮುಂಬರುವ ಪರೀಕ್ಷೆಗೆ ಉತ್ತಮ ತಯಾರಿ ನಡೆಸಿ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಿ. ಜೀವನವನ್ನು ಸುಲಭವಾಗಿ ತೆಗೆದುಕೊಳ್ಳುವದು ಬೇಡ. ಇರುವ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡುವ ಗುರಿಯನ್ನು ಮುಟ್ಟಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಬಿಸಿಎನ್ ಸಂಸ್ಥೆಯ ಕಾರ್ಯದರ್ಶಿ ಲೋಹಿತ್ ನೆಲವಿಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಷ್ಟ ಎನಿಸುವ ಇಂಗ್ಲಿಷ್ ವಿಷಯವನ್ನು ಪರೀಕ್ಷಾ ದೃಷ್ಟಿಯಿಂದ ಸುಲಭಗೊಳಿಸುವ ಈ ಕಾರ್ಯಾಗಾರಗಳ ಸದುಪಯೋಗ ಆಗಬೇಕು. ವಾರ್ಷಿಕ ಪರೀಕ್ಷೆಗೆ ತಯಾರಾಗಲು ಈ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿವೆ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಪ್ರಗತಿ ಸಾಧಿಸಬೇಕೆನ್ನುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಕಾರ್ಯಾಗಾರ ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿ ಮಾಡಿದ್ದೇವೆ. ಇಂತವುಗಳ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಸಾಧನೆ ಮಾಡಿದರೆ ನಾವು ಮಾಡಿದ ಕಾರ್ಯಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರುಗಳಾದ ಜಾನಾ ನಾಯಕ್, ಎ.ವಾಯ್. ಕಳ್ಳಿಮನಿ, ಉಪನ್ಯಾಸಕರಾದ ರಮೇಶ ಗಿಣಿ, ರಾಜಶೇಖರ, ಬಸವರಾಜ ಶೆಟ್ಟರ, ವೆಂಕಟೇಶ ಪೂಜಾರ, ಗಿರೀಶ ರೆಡ್ಡಿ, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿಷಯಗಳ ಉಪನ್ಯಾಸಕರು ಹಾಜರಿದ್ದರು.

ಇಂಗ್ಲೀಷ್ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ ಶಿರಹಟ್ಟಿ ಸರಕಾರಿ ಪ.ಪೂ ಕಾಲೇಜು ಪ್ರಾಚಾರ್ಯ ಬಸವರಾಜ ಗಿರಿತಿಮ್ಮನ್ನವರ್, ಗದಗ ಕೆವಿಎಸ್‌ಆರ್ ಪಿಯು ಕಾಲೇಜು ಉಪನ್ಯಾಸಕ ರಮಾಕಾಂತ ದೊಡ್ಡಮನಿ, ಕನ್ನಡ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ ತಿಮ್ಮಾಪೂರ ಕೆವಿಎಸ್‌ಆರ್ ಉಪನ್ಯಾಸಕ ಶಾಂತಕುಮಾರ ಮಲ್ಲಾಪುರ, ಬಿಸಿಎನ್ ವಿಜನ್ ಪಿಯು ಕಾಲೇಜು ಪ್ರಾಚಾರ್ಯ ಮಂಜುನಾಥ ಭಂಡಿವಾಡ, ಶಿಗ್ಲಿ ಸರಕಾರಿ ಪ.ಪೂ ಕಾಲೇಜು ಉಪನ್ಯಾಸಕ ತಮ್ಮನಗೌಡ ಪಾಟೀಲ ಬದಲಾದ ಹೊಸ ಪರೀಕ್ಷಾ ಪದ್ಧತಿ ಹಾಗೂ ಪ್ರಶ್ನೆಪತ್ರಿಕೆ ಮಾದರಿಯ ಪ್ರಕಾರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಉತ್ತಮ ಅಂಕ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡಿದರು.


Spread the love

LEAVE A REPLY

Please enter your comment!
Please enter your name here