ವಿಜಯಸಾಕ್ಷಿ ಸುದ್ದಿ, ಗದಗ: ಹಸಿದು ಬಂದವರಿಗೆ ಕೇವಲ 5 ರೂಪಾಯಿಗಳಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಈ ಸೇವೆ ನಿರಂತರವಾಗಿ ಸಾಗಲಿ ಎಂದು ನಗರದ ಖ್ಯಾತ ವೈದ್ಯ ಡಾ. ಪ್ಯಾರಾಲಿ ನೂರಾನಿ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದ ಹತ್ತಿರದ ಹಳೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನದಿಂದ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಡಾ. ಪ್ಯಾರಾಲಿ ನೂರಾನಿರವರ 72ನೇ ವರ್ಷದ ಜನ್ಮದಿನದ ಅಂಗವಾಗಿ ಅವರ ಕುಟುಂಬದವರು ಹಮ್ಮಿಕೊಂಡಿದ್ದ 1728ನೇ ದಿನದ ಅನ್ನಪ್ರಸಾದ ಸೇವಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನದಿಂದ ಡಾ. ಪ್ಯಾರಾಲಿ ನೂರಾನಿ ದಂಪತಿಗಳನ್ನು ಹಾಗೂ ದೆಹಲಿಯಿಂದ ಆಗಮಿಸಿದ್ದ ಡಾ. ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಸ್.ಎಸ್. ಕಳಸಾಪೂರ, ಉಪಾಧ್ಯಕ್ಷ ಉಮೇಶ ಪೂಜಾರ, ಹಿರಿಯರಾದ ಗುರುಮೂರ್ತಿ ಮರೆಗುದ್ದಿ, ನಿರ್ದೇಶಕರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಸಾಮಾಜಿಕ ಕಾರ್ಯಕರ್ತ ಹೀರಾಲಾಲ ಸಿಂಗ್ರಿ ಮುಂತಾದವರು ಉಪಸ್ಥಿತರಿದ್ದರು. ಖಜಾಂಚಿ ವೆಂಕಟೇಶ ಇಮರಾಪೂರ ಕಾರ್ಯಕ್ರಮ ನಿರೂಪಿಸಿದರು.



