
ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಓದು, ಶುದ್ಧ ಬರಹದಿಂದ ಜ್ಞಾನದ ಹರಿವು ವೃದ್ಧಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಓದುವ ಹಾಗೂ ಬರೆಯುವ ಕೌಶಲ್ಯವನ್ನು ಪ್ರೋತ್ಸಾಹಿಸಲು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರೋತ್ಸಾಹದಾಯಕವಾಗಿ ಬರವಣಿಗೆಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮಕ್ಕಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಹೇಳಿದರು.
ಅವರು ನಂದೀಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 20ರಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
“ಉತ್ತಮ ಬರವಣಿಗೆಯು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಓದುವ ಹವ್ಯಾಸ ನಮ್ಮ ಜ್ಞಾನದ ವಿಕಾಸವನ್ನು ಸುಗಮಗೊಳಿಸುತ್ತದೆ. ಮಕ್ಕಳು ಓದು-ಬರಹದಲ್ಲಿ ಪರಿಣಿತರಾಗಿ ಯಶಸ್ಸು ಸಾಧಿಸಬೇಕು” ಎಂದರು.
ಪ್ರಾಯೋಜಕತ್ವ ವಹಿಸಿಕೊಂಡಿದ್ದ ಕ್ಲಬ್‌ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಿಹಿ ವಿತರಿಸಿ ಮಾತನಾಡಿ, “ಪ್ರತಿಭಾನ್ವಿತ ಸಾಧಕರು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರಾಗಿದ್ದಾರೆ. ಸರ್ಕಾರ ನೀಡುವ ಉಚಿತ ಸೌಲಭ್ಯಗಳೊಂದಿಗೆ ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡಬೇಕು” ಎಂದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಜು ವೆರ್ಣೇಕರ ಮಾತನಾಡಿ, “ಮಕ್ಕಳು ಬಾಲ್ಯದಲ್ಲಿಯೇ ಉತ್ತಮ ಹವ್ಯಾಸ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಶಾಲೆಗೆ ಬರುವುದು, ಉತ್ತಮ ಓದು-ಬರಹ ರೂಢಿಸಿಕೊಳ್ಳುವುದು ಒಳ್ಳೆಯ ಹವ್ಯಾಸಗಳು. ನಿರಂತರ ಓದಿನಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಮಕ್ಕಳು ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಆದರ್ಶಮಯವಾದ ಬದುಕು ರೂಪಿಸಿಕೊಳ್ಳಬೇಕು” ಎಂದರು.
ಗಾಳೆಮ್ಮ ಕುರ್ತಕೋಟಿ, ಭೂಮಿಕಾ ಶಿರಹಟ್ಟಿ ಪ್ರಾರ್ಥಿಸಿದರು. ರಮೇಶ ಶಿಗ್ಲಿ ಸ್ವಾಗತಿಸಿದರು. ಸುನಂದಾ ಇದ್ಲಿ ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ನಿರೂಪಿಸಿದರು. ಖಜಾಂಚಿ ಸಹನಾ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ನಿತೀಶ ಸಾಲಿ, ವೀರಣ್ಣ ಪಟ್ಟಣಶೆಟ್ಟಿ, ರಾಹುಲ ಅರಳಿ, ಡಾ. ಶಾಂತ ಕುಂಬಾರ, ಲಯನ್ಸ್ ಕ್ಲಬ್ ಮಹಿಳಾ ಘಟಕದ ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಸಾವಿತ್ರಿ ಶಿಗ್ಲಿ, ಅಮೃತಾ ವಾರ್ಕರ, ಪೂಜಾ ಅರಳಿ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಎನ್.ಎನ್. ತಹಸೀಲ್ದಾರ್ ಮಾತನಾಡಿ, “ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯ ನೀಡುತ್ತಿರುವುದಕ್ಕೆ ಅಭಿನಂದಿಸುತ್ತೇನೆ. ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಜ್ಞಾನದ ಅರಿವನ್ನು ಮೂಡಿಸಿ, ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದರು.