ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋ ಪಲ್ಟಿಯಾದ ಪರಿಣಾಮ 13 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಯಳಂದೂರು ಪಟ್ಟಣದ ಸಮೀಪದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ 13 ಮಂದಿ ಗೂಡ್ಸ್ ಆಟೋದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಯಳಂದೂರು ಸಮೀಪ ಅಡ್ಡ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಗೆ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡ 13 ಮಂದಿಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆ ಸಿಮ್ಸ್‌ಗೆ ರವಾನಿಸಲಾಗಿದೆ. ಉಳಿದವರಿಗೆ ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಯಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



